ಸುಳ್ಯ:ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ರಂಜಿತ್ ರೈ ಮೇನಾಲ ಹಾಗೂ ಮೇನಾಲ ಕಿ.ಪ್ರ.ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶೌಕತ್ ಅಲಿ
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಅಡುಗೆ ಸಿಬ್ಬಂದಿಗಳ ವೇತನ ಸಹಿತ ಹಲವು ಬೇಡಿಕೆ ಈಡೇರಿಕೆಗೆ
ಮನವಿ ಸಲ್ಲಿಸಲಾಯಿತು.ಸರಕಾರಿ ಶಾಲೆಗಳ ಆವರಣದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತದೆ. ಸರಕಾರಿ ಶಾಲೆಯ ಆವರಣ ಸ್ವಚ್ಛಗೊಳಿಸಲು ಯಾವುದೇ ಅನುದಾನಗಳು ಬರುವುದಿಲ್ಲ. ಶಾಲೆಗಳ ಆವರಣ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್ಗಳಿಗೆ ವಹಿಸಬೇಕು.ಸರಕಾರಿ ಶಾಲೆಗಳಿಗೆ ಸರಕಾರದ ಅನುದಾನ ಬಿಡುಗಡೆಗಳಲ್ಲಿ ಬದಲಾವಣೆಯನ್ನು ಬಯಸುತ್ತೇವೆ. ಹೊಸ ಕೊಠಡಿಗಳು, ಅಕ್ಷರ ದಾಸೋಹ ಕೊಠಡಿ, ಶೌಚಾಲಯಗಳು, ಶಾಲಾ ಕಾಂಪೌಂಡ್ ಇವುಗಳ ನಿರ್ಮಾಣಕ್ಕೆ ಹೊಸದಾಗಿ ಬಿಡುಗಡೆ ಮಾಡುವ ಎಲ್ಲಾ ಅನುದಾನಗಳನ್ನು ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ಗಳಿಗೆ ನೇರವಾಗಿ ನೀಡಿ ನಂತರ ಟೆಂಡರ್ಳಿಗೆ ನೀಡುವಂತಾಗಬೇಕು.
ಈಗ ಬರುವ ನರೇಗಾ ಉದ್ಯೋಗ ಖಾತರಿಯ ಅನುದಾನದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶಾಲಾಭಿವೃದ್ಧಿ ಸಮಿತಿಗಳು ಕಷ್ಟಪಡುವಂತಾಗಿದೆ. ಸರಕಾರಿ ಶಾಲೆಯ ಅನುದಾನವನ್ನು ಆಯಾ ಇಲಾಖೆಗಳಿಗೆ ನೇರವಾಗಿ ನೀಡಿ ಟೆಂಡರುಗಳಿಗೆ ನೀಡುವಂತಾಗಬೇಕು ಆದರೆ ಮಾತ್ರ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪ್ರತೀ ವಾರದ ಮೊಟ್ಟೆ ಧಾರಣೆಯನ್ನು ಗಮನಿಸಿ ಹಣ ನಿಗದಿಪಡಿಸಬೇಕು ಸರಕಾರಿ ಶಾಲೆಯ ಅಡುಗೆ ಸಿಬ್ಬಂದಿಯವರ ವೇತನವನ್ನು ಆದಷ್ಟು ಬೇಗ ಹೆಚ್ಚಿಸಬೇಕು, ಸರಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಸಮಿತಿಯವರಿಗೆ ತರಬೇತಿ ಶಿಬಿರ ನಡೆಸಬೇಕು. ಸರಕಾರಿ ಶಾಲೆಗಳಲ್ಲಿ ವರ್ಷಕ್ಕೆ ಒಂದು ಬಾರಿ ಕಡ್ಡಾಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಶಾಲೆಯ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ಸಭೆಯನ್ನು ನಡೆಸುವಂತಾಗಬೇಕು.ತಾಲೂಕಿನ ಸರಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ನೀಗಿಸಬೇಕು
ಇತ್ಯಾದಿ ವಿಷಯಗಳನ್ನಿಟ್ಟು ಅವರು ಮನವಿ ಸಲ್ಲಿಸಿದ್ದಾರೆ.