ಕಣ್ಣೂರು: ಉದ್ಯೋಗ ಖಾತರಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರಿಗೆ ಆಶ್ಚರ್ಯದ ರೀತಿಯಲ್ಲಿ ನಿಧಿ ಸಿಕ್ಕಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಚೆಂಞಳಾಯಿ ಎಂಬಲ್ಲಿ ನಡೆದಿದೆ. ಉದ್ಯೋಗ ಖಾತರಿಯ ಕೆಲಸ ಮಾಡುತ್ತಿದ್ದ ಮಹಿಳೆಯರು ಕೃಷಿ ಹೊಂಡವನ್ನು ಅಗೆಯುತ್ತಿರುವಾಗ ಹೊಳೆಯುತ್ತಿರುವ ಕುಂಭ ರೂಪದ ವಸ್ತು ಕಂಡು ಬಂತು. ಮೊದಲು
ಬಾಂಬ್ ಎಂದು ಭಯಪಟ್ಟು ದೂರ ಎಸೆದರು. ಕುಂಭ ಪುಡಿ ಆದಾಗ ಆ ಪಾತ್ರದಲ್ಲಿ ಬಂಗಾರ, ವಜ್ರ, ಚಿನ್ನದ ನಾಣ್ಯಗಳು ಸೇರಿದಂತೆ ಆಭರಣಗಳ ನಿಧಿ ಪತ್ತೆಯಾಯಿತು ಎಂದು ಮಹಿಳೆಯರು ಘಟನೆಯ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ಮಹಿಳೆಯರು ಹಾಗೂ ಸ್ಥಳೀಯರು ಗ್ರಾಮ ಪಂಚಾಯತ್ಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ನಿಧಿ ಪತ್ತೆಯಾಗಿರುವ ಬಗ್ಗೆ ಪುರಾತತ್ವ ಇಲಾಖೆಗೆ ತಿಳಿಸಲಾಗಿದೆ. ಸುಮಾರು 300 ವರ್ಷ ಹಳೆಯದಾದ ನಾಣ್ಯಗಳು ಇವು ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.