ಸುಳ್ಯ: ಪ್ರಾಕೃತಿಕ ವಿಕೋಪ ಮುಂಜಾಗ್ರತೆ ಕುರಿತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪ್ರಾಕೃತಿಕ ವಿಕೋಪ ಸಂಬಂಧಿಸಿ ಕೈಗೊಳ್ಳಬೇಕಾದ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಶಾಸಕರು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಅವಘಡ ಸಂಭವಿಸಿದ ವಿಷಯ ತಿಳಿದ
ಕೂಡಾಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಬಂದಿಲ್ಲ, ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬ ದೂರು ಬರಬಾರದು ಎಂದು ಶಾಸಕರು ಸೂಚನೆ ನೀಡಿದರು. ಮಳೆಗಾಲದಲ್ಲಿ ಗುಡ್ಡ ಕುಸಿತ, ರಸ್ತೆ ಸಮಸ್ಯೆ, ಕೆಲವೊಂದು ಅವಘಡಗಳು ಸಂಭವಿಸುತ್ತದೆ. ಘಟನೆಯ ವಿಷಯ ತಿಳಿದ ಕೂಡಲೇ ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅಧಿಕಾರಿಗಳು ಬಂದಿಲ್ಲ ಎಂಬ ದೂರು ಬರಲೇಬಾರದು. ಆದ್ದರಿಂದ ಮಳೆಗಾಲದ ಈ ಸಂದರ್ಭದಲ್ಲಿ ಎಲ್ಲರೂ ಕೇಂದ್ರ ಸ್ಥಾನದಲ್ಲೇ ಇದ್ದು ಅಲರ್ಟ್ ಆಗಿರಿ ಎಂದು ಅವರು ಆದೇಶ ನೀಡಿದ್ದಾರೆ.
ಯಾವುದೇ ಘಟನೆ, ಅವಘಡ ಸಂಭವಿಸಿದಲ್ಲಿ ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣ ಏನು ಸ್ಪಂದನೆ ಮಾಡಬೇಕೋ ಅದನ್ನು ಮಾಡಿ. ಮಳೆಗಾಲದ ಅವಧಿಯಲ್ಲಿ ಸ್ವಲ್ಪ ಹೆಚ್ಚು ಜಾಗೃತರಾಗಿರಿ ಎಂದು ಅವರು ಸೂಚನೆ ನೀಡಿದರು.
ಮಳೆಯ ನೀರು ರಸ್ತೆಯಲ್ಲಿ ಹರಿಯುತಗತಿರುವ ಬಗ್ಗೆ ದೂರುಗಳು ಇವೆ. ಮಳೆ ನೀರು ಚರಂಡಿಯಲ್ಲಿ ಹೋಗಬೇಕು ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಸೂಚಿಸಿರು.
ಸುಳ್ಯ ನಗರದ ಕಲ್ಲುಮುಟ್ಲು ವ್ಯಾಪ್ತಿಯಲ್ಲಿ ಗುಡ್ಡ ಜರಿಯುವ ಭೀತಿಯಿದೆ. ಇಂಜಿನಿಯರ್ಗಳು ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಯಾವುದೇ ಹೊಸ ನಿರ್ಮಾಣ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಹೇಳಿದರು. ನೀವು ಈ ಕುರಿತು ನಿಗಾ ವಹಿಸಿ ಎಂದು ಶಾಸಕರು ಸೂಚನೆ ನೀಡಿದರು.
ಸೇತುವೆ, ರಸ್ತೆ ಹಾನಿ ಕುರಿತು ಇದ್ದರೆ ಅದರ ವರದಿ ಕೊಡಿ ಎಂದು ಶಾಸಕರು ಹೇಳಿದರು. ಇದಕ್ಕೆ ಉತ್ತರಿಸಿದ ಜಿ.ಪಂ. ಇಂಜಿನಿಯರ್ ಗಳು ಮಾತನಾಡಿ ಈ ವರ್ಷ ಪ್ರಾಕೃತಿಕ ವಿಕೋಪ ಆದಾಗ ತಾತ್ಕಾಲಿಕ ಕೆಲಸ ನಿರ್ವಹಿಸಿದ್ದೇವೆ. ಆದರೆ ಕಳೆದ ವರ್ಷ ಹಾನಿ ಸಂಬಂಧಿಸಿದ ಶಾಶ್ವತ ಪರಿಹಾರಕ್ಕೆ 45 ಕೋಟಿ ಎಸ್ಟಿಮೇಟ್ ಕಳುಹಿಸಿ ಕೊಟ್ಟಿದ್ದೇವೆ. ಆದರೆ ಅನುದಾನ ಬಂದಿಲ್ಲ. 22 ಸೇತುವೆ ರಿಪೇರಿಗೆ 60 ಸಾವಿರದಂತೆ 13 ಲಕ್ಷ ರೂ ಬಂದಿದೆ ಎಂದು ಹೇಳಿದರು.
ತಹಶೀಲ್ದಾರ್ ಮಂಜುನಾಥ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎನ್. ಭವಾನಿಶಂಕರ, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಪಿ.ಡಿ.ಒ. ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.