ಮಂಗಳೂರು:ಧನಾತ್ಮಕ ಚಿಂತನೆಗೆ ಓದುವ ಹವ್ಯಾಸ ಪೂರಕವಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ,ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಯೂತ್ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿರುವ ಸಮುದಾಯ
ವಾಚನಾಲಯಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆಗೆ ವಿವಿಧ ಜಿಲ್ಲೆಯ ರೋಗಿಗಳು ದಾಖಲಾಗುತ್ತಾರೆ. ರೋಗಿಗಳು ಮತ್ತು ರೋಗಿಯ ಆರೈಕೆ ಮಾಡುವವರಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಹಾಗೂ ಧನಾತ್ಮಕ ಚಿಂತನೆಯನ್ನು ಹೆಚ್ಚಿಸಿಕೊಳ್ಳಲು ಸಮುದಾಯ ವಾಚನಾಲಯ ಬಹಳಷ್ಟು ಸಹಕಾರಿಯಾಗಿದೆ. ಇದೊಂದು ಮಾದರಿ ವಾಚನಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಸರಕಾರಿ ಆಸ್ಪತ್ರೆ ಗಳಲ್ಲಿ ಆರಂಭಿಸಲು ಇದು ಪ್ರೇರಣೆಯಾಗಿದೆ ಎಂದು ಹೇಳಿದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಸುಸಜ್ಜಿತವಾದ ಸಮುದಾಯ ವಾಚನಾಲಯ ಅರಂಭಿಸಲು ಕೊಠಡಿಯನ್ನು ಶೀಘ್ರವಾಗಿ ಒದಗಿಸಲಾಗುವುದು ಎಂಬುದಾಗಿ ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ,ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅನಂದ್, ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಅಲೂರು ತಿಮ್ಮಯ್ಯ, ,ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸದಾಶಿವ, ಜಿಲ್ಲಾ ಆಯುಷ್ಯ ಅಧಿಕಾರಿ ಡಾ. ಇಕ್ಬಾಲ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ,ವೆನ್ಲಾಕ್ ಆಸ್ಪತ್ರೆಯ ಅರ್ಥೋ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್ ಕಾಮತ್,ರೆಡ್ ಕ್ರಾಸ್ ಸಂಸ್ಥೆಯ ರವೀಂದ್ರನಾಥ್ ಉಚ್ಚಿಲ್ ಉಪಸ್ಥಿತರಿದ್ದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಸ್ತಾಪಿಸಿದ ರು ,ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.