ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆ ನಡೆಯುವ ಶಿವರಾತ್ರಿಗೆ ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ಪಾದಯಾತ್ರಿಗಳು ಆಗಮಿಸಲಿದ್ದು ಅವರ ಸ್ವಾಗತಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.ಬೆಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಮಡಿಕೇರಿ, ತುಮಕೂರು ಮೊದಲಾದ ಊರುಗಳಿಂದ 26 ಸಾವಿರ ಮಂದಿ ಪಾದಯಾತ್ರಿಗಳು ಬರುವುದಾಗಿ ಪೂರ್ವಭಾವಿಯಾಗಿ ತಿಳಿಸಿದ್ದು, ಅವರಿಗೆ ಧರ್ಮಸ್ಥಳದಲ್ಲಿ
ವಸತಿಛತ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತಕಾರ್ಯಾಲಯವನ್ನು ಬುಧವಾರ ಧರ್ಮಾಧಿಕಾರಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಅವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿದರು.ಸ್ವಾಗತ ಕಾರ್ಯಾಲಯದಲ್ಲಿ ಪಾದಯಾತ್ರಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಅವರಿಗೆ ಬೇಕಾದ ಮಾಹಿತಿ, ಮಾರ್ಗದರ್ಶನ ಕೊಡಲಾಗುವುದು. ಪಾನೀಯದ ವ್ಯವಸ್ಥೆಯೂ ಇದೆ. ಅಗತ್ಯವಿದ್ದವರಿಗೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯವೂ ಇದೆ.
ಈಗಾಗಲೆ ಪಾದಯಾತ್ರಿಗಳು ಚಾರ್ಮಾಡಿ, ಮುಂಡಾಜೆ, ಉಜಿರೆ ತಲುಪಿದ್ದು ಶುಕ್ರವಾರ ಧರ್ಮಸ್ಥಳ ತಲುಪುವರು. ಸಂಜೆ 6 ಗಂಟೆಗೆ ದೇವಸ್ಥಾನ ಬಳಿ ಇರುವ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಶಿವಪಂಚಾಕ್ಷರಿ” ಪಠಣವನ್ನು ದೀಪ ಬೆಳಗಿಸಿ ಉದ್ಘಾಟಿಸುವರು. ಬಳಿಕ ಇಡಿ ರಾತ್ರಿ ಭಕ್ತಾದಿಗಳು ಭಜನೆ, ಪ್ರಾರ್ಥನೆ, ಧ್ಯಾನದಲ್ಲಿ ಉಪವಾಸ, ವೃತ-ನಿಯಮಗಳೊಂದಿಗೆ ಜಾಗರಣೆ ಮಾಡುವರು. ದೇವಸ್ಥಾನದಲ್ಲಿ ದೇವರದರ್ಶನಕ್ಕೆ ಅವಕಾಶವಿದೆ. ಶನಿವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಲಿದೆ.
ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯಪ್ರಸಾದ್, ಭವಾನಿ ಮಾಹಿತಿ ಕಛೇರಿಯ ವ್ಯವಸ್ಥಾಪಕ ಮೋಹನ್, ವಿಜಯ ಗೌಡ ಹಾಗೂ ಸಂತೋಷ್ ಗೌಡ ಉಪಸ್ಥಿತರಿದ್ದರು.
—














