ಧರ್ಮಸ್ಥಳ: ಎಲ್ಲಾ ಧರ್ಮಗಳ ಸಾರ ಬದುಕಿನಲ್ಲಿ ಶಾಂತಿ, ತೃಪ್ತಿ, ನೆಮ್ಮದಿ ಮತ್ತು ಸಂತೊಷ ನೀಡುವುದೇ ಆಗಿದೆ. ಧರ್ಮದ ಮರ್ಮವನ್ನರಿತು ಬದುಕಿನಲ್ಲಿ ಅನುಷ್ಠಾನಗೊಳಸಿದಾಗ ಶಾಂತಿ, ಸಾಮರಸ್ಯದ ಜೀವನ ಸಾಧ್ಯ ಎಂದು ಖ್ಯಾತ ವಿದ್ವಾಂಸ ಗುರುರಾಜ ಕರ್ಜಗಿ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ ೯೧ನೇ ಅಧಿವೇಶನವನ್ನು
ಉದ್ಘಾಟಿಸಿ ಮಾತನಾಡಿದರು.
ಧರ್ಮವು ಶಾಶ್ವತ ಮತ್ತು ನಿತ್ಯವಾದುದು. ಮಾನವ ಜನಾಂಗದ ಕಲ್ಯಾಣವೇ ಧರ್ಮದ ಗುರಿಯಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣದಲ್ಲಿ ಹೇಳಿದರು.
ಯಾರು ಧರ್ಮವನ್ನು ರಕ್ಷಿಸುತ್ತಾರೊ, ಅವರನ್ನು ಧರ್ಮವೇ ರಕ್ಷಿಸುತ್ತದೆ.
ಧರ್ಮಸ್ಥಳದಲ್ಲಿ ೧೯೩೩ ರಿಂದ ಪ್ರತಿವರ್ಷವೂ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನದ ಮೂಲಕ ಭಕ್ತರಿಗೆ ಉತ್ತಮ ಸಂದೇಶ ನೀಡಲಾಗುತ್ತಿದೆ. ಅಂತರಂಗದ ಶುದ್ಧತೆ ಹಾಗೂ ಪರಿಪಕ್ವತೆಯಿಂದ ಧರ್ಮದ ಆಚರಣೆಯೊಂದಿಗೆ ಬದುಕಿನಲ್ಲಿ ಎಲ್ಲರೂ ಒಳಿತನ್ನು ಕಾಣಬೇಕೆಂಬುದೇ ಸರ್ವಧರ್ಮ ಸಮ್ಮೇಳನದ ೯೧ನೆ ಅಧಿವೇಶನದ ಆಶಯ ಮತ್ತು ಸಂದೇಶವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಅಧ್ಯಕ್ಷತೆ ವಹಿಸಿದ ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯೊಂದಿಗೆ ಮಾನವೀಯತೆ ಮೆರೆದರೆ ವಿಶ್ವಶಾಂತಿ ಸಾಧ್ಯವಾಗುತ್ತದೆ. ಭಾರತದಲ್ಲಿ ಮಾತ್ರ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ ಎಂದು ಸ್ವಾಮೀಜಿ ನುಡಿದರು.
“ಆಧುನಿಕ ಭಾರತ- ಧರ್ಮ ಸಮನ್ವಯತೆ” ಎಂಬ ವಿಷಯದ ಬಗ್ಯೆ ಡಾ. ಎಂ. ಆರ್. ವೆಂಕಟೇಶ್ ಉಪನ್ಯಾಸ ನೀಡಿದರು. “ಪ್ರಾಚೀನ ಭಾರತ- ಧರ್ಮ ಸಮನ್ವಯತೆ” ಎಂಬ ವಿಚಾರದಲ್ಲಿ ಡಾ. ವಿ.ಬಿ. ಆರತಿ ಮತ್ತು “ಮಧ್ಯಕಾಲೀನ ಭಾರತ- ಧರ್ಮ ಸಮನ್ವಯತೆ” ಎಂಬ ವಿಷಯದಲ್ಲಿ ಮಹಮ್ಮದ್ ಗೌಸ್ ರಶೀದ ಅಹ್ಮದ ಹವಾಲ್ದಾರ ಉಪನ್ಯಾಸ ನೀಡಿದರು.
ಎಸ್.ಆರ್. ವಿಘ್ನರಾಜ್ ಸಂಪಾದಿಸಿದ “ಭೈರವೇಶ್ವರ ಪುರಾಣ” ಗ್ರಂಥವನ್ನು ಸ್ವಾಮೀಜಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಉಪಸ್ಥಿತರಿದ್ದರು.
ಶ್ರೀನಿವಾಸ ರಾವ್ ಧರ್ಮಸ್ಥಳ ಧನ್ಯವಾದವಿತ್ತರು. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.









