ಧರ್ಮಸ್ಥಳ: ಮದ್ಯವ್ಯಸನದ ಚಟಕ್ಕೆ ಬಲಿಯಾಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಕುಟುಂಬದೊಳಗೆ ಪ್ರೀತಿ-ವಿಶ್ವಾಸ ಕಡಿಮೆಯಾಗಿ ಮಾನವೀಯ ಸಂಬಂಧಗಳು ಕೆಟ್ಟು ವ್ಯಕ್ತಿತ್ವವೇ ನಾಶವಾಗುತ್ತದೆ. ಆದುದರಿಂದ ವ್ಯಸನ ಮುಕ್ತ ಮನೆ, ಸಮಾಜ ಹಾಗೂ ತನ್ಮೂಲಕ ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣವಾಗಬೇಕು. ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣ ಶ್ರೇಷ್ಠವಾದ ಪುಣ್ಯದ ಕಾಯಕವಾಗಿದೆ ಎಂದು
ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
ಅವರು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ “ನವಜೀವನ ಸಮಾವೇಶ”ವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಪೂರ್ಣ ಸಮಾಜ ರೂಪಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ವ್ಯಸನಮುಕ್ತ ಭಾರತ ನಿರ್ಮಾಣದ ಮೂಲಕ ಎಲ್ಲರ ಭಾಗ್ಯದ ಬಾಗಿಲು ತೆರೆದು ಸರ್ವರೂ ಸುಖ-ಶಾಂತಿ, ನೆಮ್ಮದಿಯ ಜೀವನದೊಂದಿಗೆ ಲೋಕಕಲ್ಯಾಣವಾಗಲಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯಪಾನದಿಂದ ವ್ಯಕ್ತಿತ್ವದ ಸರ್ವನಾಶವಾಗಿ ಗೌರವಯುತ ಜೀವನ ಸಾಧ್ಯವಾಗುವುದಿಲ್ಲ. ಮದ್ಯವ್ಯಸನ ಮುಕ್ತರು ಪರಿಶುದ್ಧರಾದ ಪವಿತ್ರಾತ್ಮರಾಗುತ್ತಾರೆ ಎಂದರು.
ಹೇಮಾವತಿ ವೀ. ಹೆಗ್ಗಡೆ ಶುಭಾಶಂಸನೆ ಮಾಡಿದರು.ಉಡುಪಿಯ ಡಾ. ವಿರೂಪಾಕ್ಷ ದೇವರಮನೆ ಬರೆದ “ನಿನಗೆ ನೀನೆ ಗೆಳೆಯ” ಪುಸ್ತಕವನ್ನು ಹೇಮಾವತಿ ವೀ. ಹೆಗ್ಗಡೆ ಲೋಕಾರ್ಪಣೆ ಮಾಡಿದರು.
ಡಿ. ಹರ್ಷೇಂದ್ರ ಕುಮಾರ್ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮೋನಪ್ಪ ಗೌಡ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವೀ. ಪಾಯಸ್ ಧನ್ಯವಾದವಿತ್ತರು.