ಧರ್ಮಸ್ಥಳ:ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಜೊತೆ ನಾಡಿನ ಎಲ್ಲಾ ಭಕ್ತರು, ಜನರು ಸದಾ ಇರುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಭರವಸೆ ನೀಡಿದರು. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಸಹಕಾರಿಗಳು ಭಾನುವಾರ ಧರ್ಮಸ್ಥಳಕ್ಕೆ ಧರ್ಮಜಾಗೃತಿ ಯಾತ್ರೆಯಲ್ಲಿ ಮೂರು ಸಾವಿರಕ್ಕೂ ಮಿಕ್ಕಿ
ವಾಹನಗಳ ಜಾಥಾದಲ್ಲಿ ಬಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಧರ್ಮಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಸತ್ಯ, ಧರ್ಮ, ನ್ಯಾಯ, ನೀತಿ ಸದಾ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ಧರಾಗಿದ್ದೇವೆ ಎಂದು ಹೇಳಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ, ಗೌರವ ಮತ್ತು ಅಭಿಮಾನ ತಮಗೆ ಹೆಚ್ಚಿನ ಉತ್ಸಾಹ ಮತ್ತು ಭರವಸೆ ಮೂಡಿಸಿದೆ ಎಂದರು.
ಮಾಣಿಲದ ಮೋಹನದಾಸ ಸ್ವಾಮೀಜಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಧನ್ಯವಾದವಿತ್ತರು.












