ದೇವರಗುಂಡ:ಸುಮಾರು ಹತ್ತು ತಿಂಗಳ ಬಳಿಕ ಮಂಡೆಕೋಲು ಗ್ರಾಮದ ದೇವರಗುಂಡ ಭಾಗದ ರೈತರ ತೋಟಕ್ಕೆ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ. ಆನೆಗಳು ನಿರಂತರ ದಾಳಿ ಮಾಡುತ್ತಿರುವುದು ಕೃಷಿಕರ ನಿದ್ದೆ ಗೆಡಿಸಿದೆ. ಒಂದು ವರುಷದ ಹಿಂದೆ ದೇವರಗುಂಡದಲ್ಲಿ ತೋಟಗಳಿಗೆ ಸತತವಾಗಿ ಆನೆಗಳು ದಾಳಿಮಾಡಿ ಅಲ್ಲೇ ಹತ್ತಿರದ ಕಾಡಿನಲ್ಲಿ ಬೀಡುಬಿಟ್ಟಿದ್ದವು. ಆಗ ಆ ಭಾಗದ ಕೃಷಿಕರು ಕೇಂದ್ರಸರಕಾರದ ಯೋಜನೆಯಾದ ಖಾದಿ ಮತ್ತು ಗ್ರಾಮದ್ಯೋಗ ಇಲಾಖೆಯಿಂದ ಮತ್ತು
ಸುಳ್ಯ ಜೇನು ಸೊಸೈಟಿ ವತಿಯಿಂದ ತೋಟ ಹಾನಿಗೀಡಾದ ಕೃಷಿಕರಿಗೆ ತಲಾ 10 ಜೇನು ಪೆಟ್ಟಿಗೆ ಕುಟುಂಬ ಸಮೇತ ನೀಡಿದ್ದರು. ಆ ಜೇನು ಪೆಟ್ಟಿಗೆಗಳನ್ಬು ಆನೆ ಬರುವ ದಾರಿಗೆ ಅಡ್ಡಲಾಗಿ ಒಂದಕ್ಕೊಂದು ಜೋಡಣೆ ಮಾಡಿ ಸಾಲಾಗಿ ಇರಿಸಲಾಗಿತ್ತು. ಇದರಿಂದ ಯಶಸ್ವಿಯನ್ನೂ ಕಂಡರು. ಅ ನಂತರ ಆನೆಗಳು ಆ ದಾರಿ ಮೂಲಕ ಬಂದು ತೋಟಕ್ಕೆ ದಾಳಿ ಮಾಡಿರಲಿಲ್ಲ.
ಇದೀಗ ಪಥ ಬದಲಿಸಿ ಬೇರೆ ದಾರಿಯಿಂದ ಸತತವಾಗಿ ಎರಡು ದಿನಗಳಿಂದ ದಾಳಿ ಮಾಡಲು ಪ್ರಾರಂಭಿಸಿವೆ. ಅರಣ್ಯ ಇಲಾಖೆ ಯವರಿಗೆ ಮಾಹಿತಿ ನೀಡಿ ಎರಡೂ ದಿನವೂ ರಾತ್ರಿ ಬಂದು ಆನೆಗಳನ್ನು ಕಾಡಿಗೆ ಅಟ್ಟಲಾಗಿದೆ. ಆದರೆ ಹಗಲು ಹೊತ್ತಿನಲ್ಲಿ ಹೊಳೆಯಿಂದ ಆಚೆ ಕೇನಾಜೆ ಕಾಡಿಬಲ್ಲಿ ಬೀಡುಬಿಟ್ಟು ಸಂಜೆಯಾಗುತ್ತಲೇ ಹೊಳೆ ದಾಟಿ ತೋಟಕ್ಕೆ ದಾಂಗುಡಿಯಿಡುತ್ತಿವೆ ಎಂದು ಕೃಷಿಕರಾದ ಬಾಲಚಂದ್ರ ದೇವರಗುಂಡ ಹೇಳುತ್ತಾರೆ. ಈ ಭಾಗದ ಕೃಷಿಕರಾದ ಬಾಲಚಂದ್ರ ದೇವರಗುಂಡ, ಡಿ. ವಿ. ಸುರೇಶ್ ದೇವರಗುಂಡ, ಉಮೇಶ್ ದೇವರಗುಂಡ, ಕೇಶವ ದೇವರಗುಂಡ, ಮುಕುಂದ ದೇವರಗುಂಡ, ನಾಗೇಶ್ ದೇವರಗುಂಡ, ತಿಮ್ಮಪ್ಪ ದೇವರಗುಂಡ, ಆಶಿಕ್ ದೇವರಗುಂಡ ಇವರ ತೋಟಗಳಿಗೆ ದಾಳಿ ಮಾಡಿ ಬಾಳೆ, ತೆಂಗು, ಅಡಿಕೆ ಕೃಷಿ ನಾಶಪಡಿಸುತ್ತಿವೆ.