ಸುಳ್ಯ:ಕರ್ನಾಟಕ ಕೇರಳ ಗಡಿ ಪ್ರದೇಶವಾದ ದೇವರಗುಂಡ- ಬನಾರಿ ಸಂಪರ್ಕಿಸುವ ರಸ್ತೆಯ ಕರ್ನಾಟಕದ ಭಾಗ ದೇವರಗುಂಡ- ಮುಗೇರು ರಸ್ತೆ ದುರಸ್ತಿ ಪಡಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಲಾಯಿತು.ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಹಾಗು ಹಿರಿಯರಾದ ವೆಂಕಟ್ರಾಮ್ ಭಟ್ ಸುಳ್ಯ ಅವರು ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಭೇಟಿ ಮಾಡಿ
ಮನವಿ ಸಲ್ಲಿಸಿದರು.ಈ ಬಹುಪಯೋಗಿ ರಸ್ತೆಯು ಸಾರ್ವಜನಿಕರಿಗೆ ನಿತ್ಯ ಸಂಚಾರಕ್ಕೆ ಅತ್ಯಂತ ಅಗತ್ಯತೆಯ ರಸ್ತೆಯಾಗಿದ್ದು ಸದ್ರಿ ರಸ್ತೆಯು ಪಂಜಿಕಲ್ಲು ದೇವರಗುಂಡದಿಂದ ಒಂದೂವರೆ ಕಿ.ಮೀ ನಷ್ಟು ವ್ಯಾಪ್ತಿಯು ಕರ್ನಾಟಕದ ಸುಳ್ಯ ಮಂಡೆಕೋಲು ಗ್ರಾಮ ಪಂಚಯತ್ಗೆ ಒಳಪಟ್ಟಿರುವುದಾಗಿರುತ್ತದೆ. ಇತ್ತೀಚೆಗಿನ ಕೆಲವು ವರ್ಷಗಳಿಂದ ತೀವ್ರ ಹದಗೆಟ್ಟು ಸಂಚಾರಕ್ಕೆ ಸಂಕಷ್ಟವಾಗಿರುವ ಈ ರಸ್ತೆಯನ್ನು ಡಾಮರೀಕರಣ ಅಥವಾ ಕಾಂಕ್ರೀಟ್ ರೂಪದ ರಸ್ತೆಯಾಗಿ ಮಾಡಿ ಅಭಿವೃದ್ಧಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಲೋಕೋಪಯೋಗಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಚಿವರಲ್ಲಿ ಮಾತನಾಡಿ ರಸ್ತೆ ಅಭಿವೃದ್ಧಿಗೆ ಅನುದಾನ ದೊರಕಿಸುವ ಪ್ರಯತ್ನ ನಡೆಸುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ. ಪ್ರಮುಖರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ಮಹೇಶ್ ಕುಮಾರ್ ಮೇನಲ, ಪ್ರಸಾದ್ ಕಾಟೂರು ಮತ್ತಿತರರು ಇದ್ದರು.
ಸಂಪೂರ್ಣ ಎಕ್ಕುಟ್ಟಿ ಹೋಗಿರುವ ರಸ್ತೆ:
ಸುಳ್ಯ- ಕಾಸರಗೋಡು ಅಂತಾರಾಜ್ಯ ರಸ್ತೆಯಲ್ಲಿ ದೇವರಗುಂಡದಿಂದ ಬನಾರಿಗೆ ಸುಮಾರು 3 ಕಿ.ಮಿ.ದೂರ ಇದೆ. ಇದರಲ್ಲಿ ದೇವರಗುಂಡದಿಂದ ಬೆಳ್ಳಿಪ್ಪಾಡಿ ಮೈಕ್ರೋ ಟವರ್ ಸಮೀಪದವರೆಗೆ ಸುಮಾರು ಒಂದೂವರೆ ಕಿ.ಮಿ.ರಸ್ತೆ ಕರ್ನಾಟಕದ ಭಾಗ.
ಸುಮಾರು 8-10 ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿ ಕಂಡಿತ್ತು.ಆದರೆ ಇದೀಗ ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿದ್ದು ಸಂಚಾರಕ್ಕೆ

ದೇವರಗುಂಡ-ಬನಾರಿ ರಸ್ತೆಯ ಸ್ಥಿತಿ
ಅಯೋಗ್ಯವಾಗಿದೆ. ಡಾಮರು ಎದ್ದು ಹೋಗಿ ಬೃಹದಾಕಾರದ ಹೊಂಡ ಬಿದ್ದಿದೆ. ಕಾರು, ರಿಕ್ಷಾ, ದ್ವಿಚಕ್ರ ವಾಹನ ಸೇರಿ ಸಾಮಾನ್ಯ ವಾಹನ ಸಂಚಾರಕ್ಕೆ ದುಸ್ತರವಾಗಿದೆ.ದೇಲಂಪಾಡಿ, ಬನಾರಿ, ಬೆಳ್ಳಿಪ್ಪಾಡಿ ವಿವಿಧ ಭಾಗಗಳಿಂರ ನೂರಾರು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ದಿನ ನಿತ್ಯದ ಅಗತ್ಯಕ್ಜಾಗಿ ಈ ರಸ್ತೆಯ ಮೂಲಕ ಸುಳ್ಯಕ್ಕೆ ಹಾಗೂ ಕಾಸರಗೋಡಿಗೆ ಹೋಗುತ್ತಾರೆ. ರಸ್ತೆಯ ಮೂಲಕ ದೇವರಗುಂಡಕ್ಕೆ ಆಗಮಿಸಿ ಸುಳ್ಯ, ಅಥವಾ ಕಾಸರಗೋಡಿಗೆ ಹೋಗಬೇಕು. ಕೆಲವು ದಶಕಗಳ ಹಿಂದೆ ದೇವರಗುಂಡ-ಬನಾರಿ ರಸ್ತೆಯಲ್ಲಿ ಬಸ್ಗಳ ಓಡಾಟ ಇತ್ತು. ಆದರೆ ರಸ್ತೆಯ ಶೋಚನೀಯ ಸ್ಥಿತಿಯಿಂದ ಬಸ್ ಪ್ರಯಾಣ ಸ್ಥಗಿತಗೊಂಡಿತು.ಈ ರಸ್ತೆಯಲ್ಲಿ ಕೇರಳದ ಭಾಗ ತಕ್ಕಮಟ್ಟಿಗೆ ಚೆನ್ನಾಗಿದೆ. ಕರ್ನಾಟಕದ ಭಾಗದ ರಸ್ತೆಯನ್ನು ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ.












