ಮುಂಬೈ: ನಾಯಕಿ ಮೆಗ್ ಲ್ಯಾನಿಂಗ್ ಅವರ ಬಿರುಸಿನ ಬ್ಯಾಟಿಂಗ್ ಮತ್ತು ಜೆಸ್ ಜೊನಾಸೆನ್ ಅವರ ಆಲ್ರೌಂಡ್ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ 42 ರನ್ಗಳಿಂದ ಯುಪಿ ವಾರಿಯರ್ಸ್ಗೆ ಸೋಲುಣಿಸಿತು.ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ ಓವರ್ಗಳಲ್ಲಿ
4 ವಿಕೆಟ್ಗಳಿಗೆ 211 ರನ್ ಗಳಿಸಿತು. ಗುರಿ ಬೆನ್ನತ್ತಿದ ಯುಪಿ ನಿಗದಿತ ಓವರ್ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 169 ರನ್ ಮಾತ್ರ ಗಳಿಸಿತು.
ಯುಪಿ ವಾರಿಯರ್ಸ್ನ ತಹ್ಲಿಯಾ ಮೆಕ್ಗ್ರಾ (90 ರನ್, 50ಎ, 4X11, 6X4) ಹೋರಾಟ ನಡೆಸಿದರು.ಡೆಲ್ಲಿ ತಂಡದ ಜೆಸ್ ಜೋನಾಸನ್ 43 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಟಾಸ್ ಗೆದ್ದ ಯುಪಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಲ್ಯಾನಿಂಗ್ (70 ರನ್, 42 ಎ., 4X10, 6X3) ಅವರು ಸೊಗಸಾದ ಆಟ, ಜೆಸ್ ಜೋನಾಸೆನ್ (ಔಟಾಗದೆ 42, 20 ಎ., 4X3, 6X3) ಕೊನೆಯಲ್ಲಿ ಅಬ್ಬರಿಸಿದ್ದರಿಂದ ಡೆಲ್ಲಿಯ ತಂಡದ ಮೊತ್ತ 200ರ ಗಡಿ ದಾಟಿತು.
ಲ್ಯಾನಿಂಗ್ ಮತ್ತು ಶಫಾಲಿ ವರ್ಮಾ (17 ರನ್, 14 ಎ.) ಮೊದಲ ವಿಕೆಟ್ಗೆ 6.3 ಓವರ್ಗಳಲ್ಲಿ 67 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಲೈಸ್ ಕ್ಯಾಪ್ಸಿ 10 ಎಸೆತಗಳಲ್ಲಿ ಎರಡು ಸಿಕ್ಸರ್ಗಳ ನೆರವಿನಿಂದ 21 ರನ್ ಗಳಿಸಿದರು. ಜೆಮಿಮಾ ರಾಡ್ರಿಗಸ್ (ಔಟಾಗದೆ 34, 22 ಎ.) ಮತ್ತು ಜೋನಾಸೆನ್ ಅವರು ಕೊನೆಯ ಓವರ್ಗಳಲ್ಲಿ ರನ್ರೇಟ್ ಹೆಚ್ಚಿಸಿದರು. ಈ ಜೋಡಿ ಮುರಿಯದ ಐದನೇ ವಿಕೆಟ್ಗೆ 5.4 ಓವರ್ಗಳಲ್ಲಿ 67 ರನ್ ಸೇರಿಸಿತು.
ಸಂಕ್ಷಿಪ್ತ ಸ್ಕೋರ್: ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 211. ಯುಪಿ ವಾರಿಯರ್ಸ್: 20 ಓವರ್ಗಳಲ್ಲಿ 5ಕ್ಕೆ 169.