ಸುಳ್ಯ: ಎಲ್ಲೆಡೆ ದೀಪಗಳ ಪ್ರಭೆ ಸೂಸುವ ಹಣತೆಗಳು.. ಕಿವಿಗಪ್ಪಳಿಸುವ ಪಟಾಕಿ ಸದ್ದು. ಗ್ರಾಮ, ನಗರ ಸೇರಿ ನಾಡಿಗೆ ನಾಡೇ ದೀಪಗಳ ಹಬ್ಬ ದೀಪಾವಳಿಯ ಸಂಭಮದಲ್ಲಿದೆ. ಮೂರು ದಿನಗಳ ಕಾಲ ದೀಪಾವಳಿ ಹಬ್ಬ ಜನರಿಗೆ, ನಾಡಿಗೆ ಸಂಭ್ರಮ ಸಡಗರದ ಅವಿಸ್ಮರಣೀಯ ಕ್ಷಣಗಳನ್ಬು ನೀಡುತಿದೆ. ಸಂಭ್ರಮದಿಂದ ದೀಪಾವಳಿಯ ಸ್ವಾಗತಿಸಿ ನಾಡಿಗೆ ನಾಡೇ ಅಚರಿಸುತಿದೆ. ಬದುಕಿನ, ಜಗದ ಕತ್ತಲು ಸರಿಸಿ ಬೆಳಕಿನ ಪ್ರಭೆ ಸೂಸುವ ಹಣತೆಗಳು.. ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸುವ ಸಿಡಿ ಮದ್ದಿನ ಅಬ್ಬರ.. ಮನೆ, ಬೀದಿ, ಅಂಗಡಿ, ಮುಂಗಟ್ಟುಗಳು ಎಲ್ಲೆಲ್ಲೂ

ದೀಪಗಳ ಅಲಂಕಾರದ ಶೋಭೆ.. ಪಟ ಪಟ ಸಿಡಿಯುವ ಪಟಾಕಿಯ ಶಬ್ದಗಳು.. ಚಿತ್ತಾರ ಬಿಡಿಸುವ ನೆಲ ಚಕ್ರಗಳು..ಕಡ್ಡಿಗಳು.. ಒಟ್ಟಿನಲ್ಲಿ ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮ ರಂಗೇರಿದೆ. ಸುಳ್ಯ ನಗರ ಸೇರಿದಂತೆ ದೀಪಾವಳಿ ಅಚರಿಸಲು ಭರ್ಜರಿ ಸಿದ್ಧತೆಗಳೇ ನಡೆದಿದೆ. ದೀಪಾವಳಿಗೆಂದೇ ಬಳಸುವ ವಿಶಿಷ್ಟ ವಸ್ತುಗಳು ವಾರದ ಮೊದಲೇ ಅಂಗಡಿ ಮುಂಗಟ್ಟುಗಳಲ್ಲಿ ತಯಾರಾಗಿದೆ. ಬೆಳಕಿನ ಪ್ರಭೆ ಹರಿಸಲು ಅಂಗಡಿಗಳಿಗೆ ವಿವಿಧ ಬಗೆಯ ವೈವಿಧ್ಯಮಯ ಅಣತೆಗಳು ಬಂದಿದೆ. ಮಣ್ಣಿನ, ಭರಣಿಯ ಹೀಗೆ ವೈವಿಧ್ಯಮಯ ಅಣತೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ತಮಿಳುನಾಡು ಹಾಗೂ ಮತ್ತಿತರ ಕಡೆಗಲಳಿಂದ ಇಲ್ಲಿಗೆ ಅಣತೆಗಳು ಬರುತ್ತವೆ. ಎರಡು-ಮೂರು ದಿನಗಳಿಂದ ಜನ ಅಣತೆಗಳನ್ನು ಅರಸಿ ಬರುತ್ತಿದ್ದಾರೆ, ಮಣ್ಣಿನ ಅಣತೆಗಳಿಗೆ ಬೇಡಿಕೆ ಅಧಿಕ ಎನ್ನುತ್ತಾರೆ ಅಣತೆ ವ್ಯಾಪಾರಿಗಳು. ದೀಪಾವಳಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಬಣ್ಣಬಣ್ಣದ ಗೂಡು ದೀಪಗಳು. ಫ್ಯಾನ್ಸಿ ಮತ್ತಿತರ ಅಂಗಡಿಗಳು ತುಂಬಾ ಬಣ್ಣ ಬಣ್ಣದ

ಗೂಡು ದೀಪಗಳು ಮನ ಸೆಳೆಯುತಿದೆ. ಅಲ್ಲದೆ ವಿವಿಧ ಭಂಗಿಯ ಆಕಾಶ ಲ್ಯಾಂಪ್ಗಳು, ಗಾಳಿ ಪಟಗಳು, ಬಣ್ಣ ಬಣ್ಣದ ಲೈಟ್ಗಳು, ಬಣ್ಣದ ಕ್ಯಾಂಡಲ್ಗಳು ಬಂದಿದೆ. ಹಬ್ಬದ ಸಂಭ್ರಮ ಹೆಚ್ಚಿಸಲು ಸುಳ್ಯ ನಗರದಲ್ಲಿ ಪಟಾಕಿ ಅಂಗಡಿಗಳೂ ತೆರೆದಿವೆ. ನಗರದಲ್ಲಿ ಚೆನ್ನಕೇಶವ ದೇವಸ್ಥಾನದ ಸಮೀಪದ ಮೈದಾನದಲ್ಲಿ ಒಂದೇ ಕಡೆ 10 ಪಟಾಕಿ ಅಂಗಡಿಗಳು ತೆರೆಯಲಾಗಿದೆ. ವೈವಿಧ್ಯಮಯ ಹಸಿರು ಪಟಾಕಿಗಳು ತುಂಬಿದೆ. ಹಬ್ಬಕ್ಕಾಗಿ ಮಾರುಕಟ್ಟೆಗೆ ವಿವಿಧ ಬಗೆಯ ಹೂವುಗಳು, ಹಣ್ಣುಗಳು, ತರಕಾರಿಗಳು ಬಂದಿದೆ. ಬಟ್ಟೆ ಅಂಗಡಿಗಳು, ಇಲೆಕ್ಟ್ರಾನಿಕ್ಸ್, ಮೊಬೈಲ್ ಅಂಗಡಿಗಳು ಸೇರಿ ಎಲ್ಲಾ ವಾಣೀಜ್ಯ ಮಳಿಗೆಗಳು ವಿಶೇಷ ಆಫರ್ಗಳನ್ನು ಘೋಷಿಸಿ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಮುಖ್ಯವಾಗಿ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಅಂಗವಾಗಿ ಬಲಿಯೇಂದ್ರ ಪೂಜೆ, ಲಕ್ಷ್ಮೀ ಪೂಜೆ, ಗೋ ಪೂಜೆ, ಅಂಗಡಿಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಹಲವೆಡೆ ಕಲಾ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ಜನಾಕರ್ಷಣೆ ಪಡೆಯಲಿದೆ.










