ಸುಳ್ಯ:ಸಹಕಾರಿ ಸಂಸ್ಕೃತಿ ಗಟ್ಟಿಯಾಗಿ ನೆಲೆಯೂರಿದ ಕಾರಣ ಬ್ಯಾಂಕಿಂಗ್ ಕ್ಷೇತ್ರ, ಸಹಕಾರಿ ಕ್ಷೇತ್ರ ಬೆಳೆದು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.ಮಾಜಿ ಸಚಿವ ಎಸ್.ಅಂಗಾರ ನೇತೃತ್ವದ ದೀನದಯಾಳ್ ಸಹಕಾರ ಸಂಘದ ಉದ್ಘಾಟನೆಯ ಪ್ರಯುಕ್ತ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಮನೋಭಾವದಿಂದ ಇಲ್ಲಿ
ಎಲ್ಲಾ ಕ್ಷೇತ್ರಗಳು ಯಶಸ್ವಿಯಾಗಲು ಕಾರಣವಾಯಿತು. ಮಾಜಿ ಶಾಸಕರು, ಸಚಿವರಾದ ಎಸ್.ಅಂಗಾರ ಅವರು ಸಾರ್ವಜನಿಕ ಕ್ಷೇತ್ರದ ತನ್ನ ಅಪಾರ ಅನುಭವವನ್ನು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿರುವುದು ಶ್ಲಾಘನೀಯ. ಈ ಕ್ಷೇತ್ರದಲ್ಲಿ ಅವರು ಯಶಸ್ಸು ಸಾಧಿಸಲಿ, ಜಿಲ್ಲಾ ಮಟ್ಟದ ಸಹಕಾರಿ ಸಂಘವಾಗಿ ಬೆಳೆಯಲಿ ಎಂದು ಶುಭ ಹಾರೈಸಿರು. ದೀನದಯಾಳರ ಆದರ್ಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ‘ ಎಸ್.ಅಂಗಾರ ಅವರು ಶಾಸಕರಾಗಿ, ಸಚಿವರಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಇದೀಗ ಸಹಕಾರ ಸಂಘದ ಮೂಲಕ ಸಮುದಾಯದ, ಸಮಾಜದ ಆರ್ಥಿಕ ಅಭಿವೃದ್ಧಿಗೆ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸುಳ್ಯದ ರಥಬೀದಿಯ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದಲ್ಲಿ ಶುಭಾರಂಭಗೊಂಡ ದೀನದಯಾಳ್ ಸಹಕಾರ ಸಂಘವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಳ್ಯ ತಾಲೂಕು ಸಂಘಚಾಲಕರಾದ ಚಂದ್ರಶೇಖರ ತಳೂರು ರಿಬ್ಬನ್ ಕತ್ತರಿಸಿ, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ದುರ್ಗಾಪರಮೇಶ್ವರಿ ಕಲಾಮಂದಿರ ಕೇರ್ಪಳದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಟಿ.ಎ.ಪಿ.ಸಿ.ಎಂ.ಎಸ್ನ ಸಿ.ಇ.ಒ. ಜಯರಾಮ ದೇರಪ್ಪಜ್ಜನಮನೆ, ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ರಘು, ಆರ್ಎಸ್ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಬಿ.ಜೆ.ಪಿ.ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಲೆಕ್ಕ ಪರಿಶೋಧಕರಾದ ಶ್ರೀಪತಿ ಭಟ್, ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಎಸ್.ಅಂಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಸಂಘದ ನಿರ್ದೇಶಕರಾದ ಜಗನ್ನಾಥ ಜಯನಗರ ಸ್ವಾಗತಿಸಿ, ಸೋಮಶೇಖರ ಹಾಸನಡ್ಕ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕರಾದ ವೇದಾವತಿ ಅಂಗಾರ, ಹರಿಶ್ಚಂದ್ರ ಹಾಸನಡ್ಕ, ಎಸ್.ಕೃಷ್ಣ, ಸಂದೀಪ್ ಪಂಜೋಡಿ, ಶುಭಲತಾ ಮಾತ್ರಮಜಲು, ಬಾಲಪ್ಪ ಕೆ.ಮಣಿಮಜಲು, ಕುಂಞ ಕಮಿತ್ತಿಲು, ಉಮೇಶ ಕೆಳಗಿನಬೀಡು, ರವಿ ಕೆಳಗಿನಬೀಡು ಉಪಸ್ಥಿತರಿದ್ದರು.
.