ಸುಳ್ಯ:ಡೀಮ್ಡ್ ಫಾರೆಸ್ಟ್ ಹಾಗೂ ಭಾಗಷಃ ಅರಣ್ಯ ಸಮಸ್ಯೆಯಿಂದ ಕಂದಾಯ ಭೂಮಿ ವಿತರಣೆ, ಹಕ್ಕು ಪತ್ರ ವಿತರಣೆಗೆ ಆಗುವ ಸಮಸ್ಯೆಯನ್ನು ಪರಿಹರಿಸಲು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಹಾಗೂ ಪ್ರಮುಖರ ಸಭೆ ತಾಲೂಕು ಪಂಚಾಯತ್ನ ಶಾಸಕರ ಕಚೇರಿಯಲ್ಲಿ ನಡೆಯಿತು. ಪುತ್ತೂರು ಉಪವಿಭಾಗದ ನೂತನ ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ
ಕಂದಾಯ ಭೂಮಿಯ ಜೊತೆಗೆ ಡೀಮ್ಡ್ ಫಾರೆಸ್ಟ್ ಹಾಗೂ ಭಾಗಷಃ ಅರಣ್ಯ ಎಂದೂ ನಮೂದಾಗಿರುತ್ತದೆ. ಆದರೆ ಅದು ಪ್ರತ್ಯೇಕಿಸಿರುವುದಿಲ್ಲ. ಇಧರಿಂದ ಕಂದಾಯ ಭೂಮಿಯ ವಿತರಣೆಗೆ, ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಅಕ್ರಮ ಸಕ್ರಮ, 94 ಸಿ ಮತ್ತಿತರ ಹಕ್ಕುಪತ್ರ ವಿತರಣೆಗೆ ಅರಣ್ಯ ಇಲಖೆಯಿಂದ ನಿರಾಕ್ಷೇಪಣಾ ಪತ್ರ ದೊರೆಯುವುದಿಲ್ಲ. ಇದರಿಂದ ಸಮಸ್ಯೆ ಉಂಟಾಗುತಿದೆ. ಇದನ್ನು ಪರಿಹರಿಸಲು ಕಂದಾಯ, ಅರಣ್ಯ, ಸರ್ವೆ ಇಲಾಖೆ ಪಂಚಾಯತ್ ಇಲಾಖೆ ಜಂಟಿಯಾಗಿ ಸರ್ವೆ ನಡೆಸಿ ಈ ಭೂಮಿಯನ್ನು ಪ್ರತ್ಯೇಕಿಸಲು ನಿರ್ಣಯಿಸಲಾಯುತು. ಜಂಟಿ ಸರ್ವೆ ನಡೆಸಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಪ್ರತ್ಯೇಕಿಸಲಾಗುವುದು.

ಪ್ರಾಯೋಗಿಕವಾಗಿ ಎರಡು ಗ್ರಾಮಗಳಲ್ಲಿ ಜಂಟಿ ಸರ್ವೆ ಆರಂಭಿಸಲಾಗುವುದು. ಪೈಲಟ್ ಯೋಜನೆಯಾಗಿ ಎರಡು ಗ್ರಾಮಗಳಲ್ಲಿ ಶೀಘ್ರ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ. ಈ ಪ್ರಾಜೆಕ್ಟ್ಗೆ ಪ್ರತ್ಯೇಕ ಸರ್ವೆಯರ್ ನೇಮಕ ಮಾಡಬೇಕು ಎಂದು ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು.
ಸುಳ್ಯ ನಗರ ಪಂಚಾಯತ್ನ ಕಸ ವಿಲೇವಾರಿಗೆ ಕಲ್ಚರ್ಪೆಯಲ್ಲಿ ಮೂರು ಎಕ್ರೆ ಜಾಗ ಮಂಜೂರಾಗಿದ್ದರೂ
ಜಾಗ ಪೂರ್ತಿ ಸಿಗ್ತಾ ಇಲ್ಲಾ. ಕೇವಲ 1.3 ಎಕ್ರೆ ಮಾತ್ರ ಸಿಕ್ಕಿದೆ. ಉಳಿದ ಸ್ಥಳಕ್ಕೆ ಅರಣ್ಯ ಇಲಾಖೆಯ ಮಂಜೂರಾತಿ ಸಿಕ್ಕಿಲ್ಲ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ರಸ್ತೆ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ
ಅಪಾಯಕಾರಿ ಮರಗಳನ್ನು ಗುರುತಿಸಿ ತೆರವು ಮಾಡಬೇಕು ಎಂದು ಎಸಿಯವರು ಸೂಚಿಸಿದರು. ಮುಂಗಾರು ಪೂರ್ವದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಅಪಾಯಕಾರಿ ಮರಗಳನ್ನು ಗುರುತಿಸಿ ತೆರವು ಮಾಡಲಾಗುತ್ತದೆ.ಇತರ ಸಂದರ್ಭದಲ್ಲಿ ಕೂಡ ಅಪಾಯಕಾರಿ ಮರ ಕಂಡು ಬಂದರೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಪೌರ ಕಾರ್ಮಿಕರ ವಸತಿ ಗೃಹ ನಿರ್ಮಾಣಕ್ಕೆ 25 ಲಕ್ಷ ಅನುದಾನ ಬಂದಿದೆ. ನಿರ್ಮಾಣಕ್ಕೆ ಈಗಾಗಲೇ ಒಂದು ಸ್ಥಳ ಗುರುತಿಸಲಾಗಿದ್ದರೂ ಅದು ಬೇರೆ ಇಲಾಖೆಗೆ ಮಂಜೂರಾಗಿದೆ. ಆದಷ್ಟು ಬೇಗ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಬೇಕು ಎಂಬ ನಿರ್ದೇಶನ ಇದೆ. ಸ್ಥಳ ಗುರುತಿಸಬೇಕಾಗಿದೆ ಎಂದು ವಿನಯಕುಮಾರ್ ಕಂದಡ್ಕ ಹೇಳಿದರು. ನಗರ ವ್ಯಾಪ್ತಿಯಲ್ಲಿ ಶಾಲೆ, ಅಂಗನವಾಡಿಗಳಿಗೆ ಶೌಚಾಲಯ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಬೇಕಾಗಿದೆ. ಈ ಶಿಕ್ಷಣ ಸಂಸ್ಥೆಗಳಿಗೆ ಜಿ.ಪಂನಿಂದ ಅನುದಾನ ನೀಡಲು ಆಗುವುದಿಲ್ಲ ಎಂದು ಶಾಸಕರು ಹೇಳಿದರು. ಇದಕ್ಕೆ ವಿವಿಧ ಕಂಪೆನಿಗಳ ಸಿಎಸ್ಆರ್ ಪಂಡ್ ಬಳಕೆ ಮಾಡಬಹುದು ಎಂದು ಎಸಿಯವರು ಸಲಹೆ ನೀಡಿದರು. ನಗರ ಪಂಚಾಯತ್ನ ಬರ್ನಿಂಗ್ ಮೆಷಿನ್ ಬಳಸಿ ಗ್ಯಾಸಿಫಿಕೇಶನ್ ಯೋಜನೆಯ ಮುಂದುವರಿದ ಕೆಲಸಗಳಿಗೆ ಸಿಎಸ್ಆರ್ ಫಂಡ್ ಬಳಸುವ ಬಗ್ಗೆ ಯೋಚನೆ ಮಾಡಬಹುದು ಎಂದು ಎಸಿಯವರು ಸೂಚಿಸಿದರು.
ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್, ಸರ್ವೆ ಇಲಾಖೆಯ ಡಿಡಿಎಲ್ಆರ್ ರಮಾದೇವಿ.ಕೆ, ಎಡಿಎಲ್ಆರ್ ಪ್ರಸಾದಿನಿ.ಕೆ, ಸೂಪರ್ವೈಸರ್ ಉದಯಕುಮಾರ್ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ,ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ,ನ.ಪಂ.ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ,ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಚಂದ್ರಾ ಕೋಲ್ಚಾರ್, ಸಂತೋಷ್ ಕುತ್ತಮೊಟ್ಟೆ,ಸುನಿಲ್ ಕೇರ್ಪಳ, ಹರೀಶ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು. ಶಾಸಕರ ಆಪ್ತ ಕಾರ್ಯದರ್ಶಿ ಅವಿನಾಶ್ ಸ್ವಾಗತಿಸಿ, ವಂದಿಸಿದರು.









