ಸುಳ್ಯ:ಸುಳ್ಯ ತಾಲೂಕಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜಿಲ್ಲಾಧಿಕಾರಿಯೊಬ್ಬರು ಗ್ರಾಮದಲ್ಲಿ ರಾತ್ರಿಯೂ ವಾಸ್ತವ್ಯ ಮಾಡಿ ಜನರ ಜೊತೆ ಬೆರೆತ, ಜನರ ಸಮಸ್ಯೆ ಆಲಿಸಿದ ಐತಿಹಾಸಿಕ ಕ್ಷಣಕ್ಕೆ ಇಂದು ಸುಳ್ಯ ತಾಲೂಕಿನ ಮಂಡೆಕೋಲು ಸಾಕ್ಷಿಯಾಯಿತು. ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹಾಗು ಅಧಿಕಾರಿಗಳ ತಂಡ ಗಡಿ ಗ್ರಾಮವಾದ ಮಂಡೆಕೋಲಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಮಂಡೆಕೋಲು ಗ್ರಾಮಕ್ಕೆ

ಇಂದು ಸಂಜೆ ಆಗಮಿಸಿದ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಚೆಂಡೆ, ವಾದ್ಯ ಮೇಳ, ಪೂರ್ಣ ಕುಂಭದೊಂದಿಗೆ ಅದ್ದೂರಿ ಸ್ವಾಗತ ನೀಡಿದರು. ಬಳಿಕ ಶಿವಾಜಿನಗರದ ಪುತ್ಯ ಶಾಲೆಯಲ್ಲಿ ಬಯಲು ರಂಗಮಂದಿರದಲ್ಲಿ ಚಾವಡಿ ಚರ್ಚೆ ನಡೆಯಿತು. ಜಿಲ್ಲಾಧಿಕಾರಿಗಳ ಆಗಮನಕ್ಕೆ ಕಾದಿದ್ದ ನೂರಾರು ಮಂದಿ ಗ್ರಾಮಸ್ಥರು ಸಂಭ್ರಮ ಸಡಗರದಿಂದ ದೊಂದಿ, ಗ್ಯಾಸ್ ಲೈಟ್ ಬೆಳಕಿನಲ್ಲಿ ನಡೆದ ಚಾವಡಿ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.ತಮ್ಮ ಗ್ರಾಮದ ವೈಶಿಷ್ಟ್ಯ, ಇತಿಹಾಸ ಜೊತೆಗೆ ಒಂದಿಷ್ಟು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತೆರೆದಿಟ್ಟರು.
ಸಂವಾದಲ್ಲಿ ಮಾತನಾಡಿದ ಡಿಸಿ ಡಾ.ರಾಜೇಂದ್ರ ಕೆ.ವಿ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಎಂಬುದು ಸರಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ.ಗ್ರಾಮಗಳ ಜನರ ಸಮಸ್ಯೆ ಅರಿತು ಸ್ಥಳದಲ್ಲಿಯೇ ಪರಿಹರಿಸುವುದು ಇದರ ಉದ್ದೇಶ. ಜಿಲ್ಲೆಯಲ್ಲಿ ಈ ಆಶಯವನ್ನು ಅನುಷ್ಠಾನ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತಿದೆ. ಹಲವಾರು ಸಮಸ್ಯೆಗಳನ್ನು ಜನರು ಮುಂದಿಡುತ್ತಾರೆ. ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತಿದೆ ಎಂದು
ಮಂಡೆಕೋಲಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಗ್ರಾಮ ವಾಸ್ತವ್ಯ-ಚಾವಡಿ ಚರ್ಚೆ
The Sullia Mirror YouTube Channel
Please watch and Subscribe
ಹೇಳಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಅವರು ಗ್ರಾಮದ ಇತಿಹಾಸ, ವೈಶಿಷ್ಟ್ಯತೆಗಳ ಬಗ್ಗೆ ತಿಳಿಸಿದರು.
ಬಳಿಕ ಗ್ರಾಮಸ್ಥರು ವಿವಿಧ ಸಮಸ್ಯೆಗಳ ಬಗ್ಗೆ ತಿಳಿಸಿದರು. ಗ್ರಾಮವನ್ನು ಮುಖ್ಯವಾಗಿ ಕಾಡುವ ಆನೆ ಹಾವಳಿ, ವಿದ್ಯುತ್ ಸಮಸ್ಯೆ, ರಸ್ತೆಗಳ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿ, ಶ್ಮಶಾನ ಇಲ್ಲದ ಬಗ್ಗೆ, ಅಕ್ರಮ ಸಕ್ರಮ, ಕಾನಾ ಬಾಣೆ ಕುಮ್ಕಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜನರು ಮುಂದಿರಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಧನಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಶೀಲ್ದಾರ್ ಅನಿತಾಲಕ್ಷ್ಮಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಪಶು ಸಂಗೊಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು, ಮೆಸ್ಕಾಂ ಎಇಇ ಹರೀಶ್ ನಾಯ್ಕ್ ಸೇರಿದಂತೆ ವಿವಿಧ ಇಲಾಖೆಯ

ಅಧಿಕಾರಿಗಳು, ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಪ್ರಮುಖರಾದ ಡಿ.ಸಿ.ಬಾಲಚಂದ್ರ, ಜಯರಾಜ್ ಕುಕ್ಕೆಟ್ಟಿ, ಶಿವಪ್ರಸಾದ್ ಉಗ್ರಾಣಿಮನೆ, ಸದಾನಂದ ಮಾವಜಿ, ಪದ್ಮನಾಭ ಚೌಟಾಜೆ, ಉದಯಕುಮಾರ್, ವಿಪಿನ್ ನಂಬಿಯಾರ್ ಶ್ರೀಕಾಂತ್ ಮಾವಂಜಿ, ಚಂದ್ರಜಿತ್ ಮಾವಂಜಿ, ಕುಮಾರನ್ ಮಾವಂಜಿ, ರಘುಪತಿ ಉಗ್ರಾಣಿಮನೆ,ರಾಕೇಶ್ ಕಣೆಮರಡ್ಕ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಸ್ಥಳೀಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಬಳಿಕ ಜಿಲ್ಲಾಧಿಕಾರಿ ಗ್ರಾಮದಲ್ಲಿಯೇ ವಾಸ್ತವ್ಯ ಮಾಡಿದರು.

ಮುರೂರು ಚೆಕ್ ಪೋಸ್ಟ್ಗೆ ಭೇಟಿ:
ಆರಂಭದಲ್ಲಿ ಮುರೂರು ಚೆಕ್ ಪೋಸ್ಟ್ಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಚೆಕ್ ಪೋಸ್ಟ್ನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಿರಂತರ ವಾಹನ ತಪಾಸಣೆ ನಡೆಸುತ್ತಿರುವ ಕಾರಣ ಸ್ಥಳೀಯರಿಗೆ ಕಿರಿ ಕಿರಿ ಆಗುತಿದೆ ಎಂದು ಸ್ಥಳೀಯರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು. ಈ ಕುರಿತು ಸ್ಥಳೀಯರಿಗೆ ಗ್ರಾಮ ಪಂಚಾಯತ್ ವತಿಯಿಂದ ಪಾಸ್ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡುವುದಾಗಿ ಡಿಸಿಯವರು ತಿಳಿಸಿದರು.ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಸೂಕ್ತ ವ್ಯವಸ್ಥೆ ಇಲ್ಲದ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಯಿತು. ಚೆಕ್ ಪೋಸ್ಟ್ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.