ಬೆಂಗಳೂರು:ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರುವನ್ನು ವಿಕೆಟ್ ಮಣಿಸಿ ತನ್ನ ಅಜೇಯ ಓಟ ಮುಂದುವರಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 163 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ
ಡೆಲ್ಲಿ 17.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ
169 ರನ್ ಗಳಿಸಿ ಗೆಲುವಿನ ನಗು ಬೀರಿತು.58 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿಗೆ ಕೆ.ಎಲ್.ರಾಹುಲ್ ಆಸರೆಯಾದರು. ಆಕರ್ಷಕ ಅರ್ಧ ಶತಕ ಸಿಡಿಸಿದ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 93 ರನ್ ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಕೇವಲ 5 ರನ್ ಗಳಿಸಿದ್ದ ಸಂದರ್ಭದಲ್ಲಿ ರಾಹುಲ್ ನೀಡಿದ ಕ್ಯಾಚ್ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಕೈಚೆಲ್ಲಿದ್ದರು. ಇದಕ್ಕೆ ಆರ್ಸಿಬಿ ದೊಡ್ಡ ಬೆಲೆ ತೆರಬೇಕಾಗಿ ಬಂತು. ರಾಹುಲ್ ಹಾಗೂ ಟಿಸ್ಟನ್ ಸ್ಟಬ್ ಮುರಿಯದ 5ನೇ ವಿಕೆಟ್ಗೆ 111 ರನ್ ಸೇರಿಸಿದರು. ಸ್ಟಬ್ಸ್ 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 38 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಬೆಂಗಳೂರಿಗೆ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 3 ಓವರ್ಗಳಲ್ಲೇ 50 ರನ್ಗಳ ಜೊತೆಯಾಟ ಕಟ್ಟಿದರು. ಈ ಪೈಕಿ ಮಿಚೆಲ್ ಸ್ಟಾರ್ಕ್ ಓವರ್ವೊಂದರಲ್ಲಿ 30 ರನ್ ಹರಿದು ಬಂತು. ಈ ಹಂತದಲ್ಲಿ ಫಿಲ್ ಸಾಲ್ಟ್ ರನೌಟ್ ಆಗಿರುವುದು ಆರ್ಸಿಬಿಗೆ ಹಿನ್ನಡೆಯಾಗಿ ಪರಿಣಮಿಸಿತು. ಅಲ್ಲಿಂದ ಬಳಿಕ ಆರ್ಸಿಬಿಯ ಪತನವೂ ಆರಂಭವಾಯಿತು.
ಸಾಲ್ಟ್ ಕೊಹ್ಲಿ ಜೊತೆ 3.5 ಓವರ್ಗಳಲ್ಲಿ 61 ರನ್ಗಳ ಜೊತೆಯಾಟ ಕಟ್ಟಿದರು.ಸಾಲ್ಟ್ 17 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ಅಬ್ಬರಿಸಿದರು. ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ 22 ರನ್ ಗಳಿಸಿ ಔಟ್ ಆದರು.
ನಾಯಕ ರಜತ್ ಪಾಟೀದಾರ್ (25), ದೇವದತ್ತ ಪಡಿಕ್ಕಲ್ (1), ಲಿಯಾಮ್ ಲಿವಿಂಗ್ಸ್ಟೋನ್ (4), ಜಿತೇಶ್ ಶರ್ಮಾ (1) ಹಾಗೂ ಕೃಣಾಲ್ ಪಾಂಡ್ಯ (18) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.ಕೊನೆಯ ಹಂತದಲ್ಲಿ ಅಜೇಯ 37 ರನ್ ಗಳಿಸಿದ ಟಿಮ್ ಡೇವಿಡ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 20 ಎಸೆತಗಳನ್ನು ಎದುರಿಸಿದ ಟಿಮ್, ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿಗಳನ್ನು ಬಾರಿಸಿದರು.
ಡೆಲ್ಲಿ ಪರ ಕುಲದೀಪ್ ಯಾದವ್ ಹಾಗೂ ವಿಪ್ರಾಜ್ ನಿಗಂ ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.
ಆಡಿರುವ ಎಲ್ಲ 4 ಪಂದ್ಯಗಳಲ್ಲಿ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ 8 ಅಂಕ ಗಳಿಸಿದೆ.ಆರ್ಸಿಬಿ 5 ಪಂದ್ಯದಲ್ಲಿ 3ರಲ್ಲಿ ಗೆದ್ದು 2ರಲ್ಲಿ ಸೋಲನುಭವಿಸಿದೆ.
ತವರಿನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತಿರುವ ಆರ್ಸಿಬಿ, ಡೆಲ್ಲಿ ವಿರುದ್ಧ ಸೋತು ತವರಿನಲ್ಲಿ ನಿರಾಶೆ ಅನುಭವಿಸಿತು.