ವಿಶಾಖಪಟ್ಟಣ : ಡೆಲ್ಲಿ ಕ್ಯಾಪಿಟಲ್ಸ್ ತಂಡ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ರನ್ ಅಂತರದಿಂದ ಮಣಿಸಿದೆ.ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 191 ರನ್ ಗಳಿಸಿದೆ. ಇದಕ್ಕೆ ಉತ್ತರವಾಗಿ ಚೆನ್ನೈ ತಂಡ 20 ಓವರ್ಗಳಲ್ಲಿ
6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಡೆಲ್ಲಿ ಈಗಿನ ಟೂರ್ನಿಯಲ್ಲಿ ತಾನಾಡಿದ 3ನೇ ಪಂದ್ಯದಲ್ಲಿ ಮೊದಲ ಜಯ ದಾಖಲಿಸಿದೆ.
ಚೆನ್ನೈ ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್(1 ರನ್)ಹಾಗೂ ರಚಿನ್ ರವೀಂದ್ರ(2)ವಿಕೆಟನ್ನು ಬೇಗನೇ ಔಟ್ ಆದರು. ಅಜಿಂಕ್ಯ ರಹಾನೆ(46 ರನ್, 30 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಡ್ಯಾರಿಲ್ ಮಿಚೆಲ್(34 ರನ್, 26 ಎಸೆತ, 1 ಬೌಂಡರಿ, 2 ಸಿಕ್ಸರ್)3ನೇ ವಿಕೆಟ್ಗೆ 45 ಎಸೆತಗಳಲ್ಲಿ 68 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಆದರೆ ಈ ಇಬ್ಬರು ಔಟಾದ ನಂತರ ಚೆನ್ನೈ ಮತ್ತೆ ಕುಸಿತ ಕಂಡಿತು. ಮಾಜಿ ನಾಯಕ ಎಂ.ಎಸ್. ಧೋನಿ(ಔಟಾಗದೆ 37, 16 ಎಸೆತ 4 ಬೌಂಡರಿ, 3 ಸಿಕ್ಸರ್) ಹಾಗೂ ರವೀಂದ್ರ ಜಡೇಜ(ಔಟಾಗದೆ 21, 17 ಎಸೆತ) 7ನೇ ವಿಕೆಟ್ಗೆ 51 ರನ್ ಜೊತೆಯಾಟ ನಡೆಸಿ ತಂಡದ ಸೋಲಿನ ಅಂತರ ಕಡಿಮೆಗೊಳಿಸಿದರು.ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್(52 ರನ್) ಹಾಗೂ ನಾಯಕ ರಿಷಭ್ ಪಂತ್(51 ರನ್)ಅರ್ಧಶತಕದ ಕೊಡುಗೆ ನೀಡಿದರು.ವಾರ್ನರ್ ಹಾಗೂ ಪೃಥ್ವಿ ಶಾ(43 ರನ್) 9.3 ಓವರ್ಗಳಲ್ಲಿ 93 ರನ್ ಸೇರಿಸಿ ಡೆಲ್ಲಿಗೆ ಉತ್ತಮ ಆರಂಭ ಒದಗಿಸಿದರು.
ಪ್ರಸಕ್ತ ಐಪಿಎಲ್ ನಲ್ಲಿ ಪಂತ್ ಮೊದಲ ಅರ್ಧಶತಕ(51 ರನ್, 32 ಎಸೆತ, 4 ಬೌಂಡರಿ, 3 ಸಿಕ್ಸರ್)ಗಳಿಸಿದರು.