ಮುಂಬೈ: ಮಾಜಿ ನಾಯಕ ರೋಹಿತ್ ಶರ್ಮ ಭರ್ಜರಿ ಶತಕ ಸಿಡಿಸಿ ನಡೆಸಿದ ಏಕಾಂಗಿ ಹೋರಾಟ ವ್ಯರ್ಥವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ರನ್ಗಳ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 206 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಮುಂಬೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ
186 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ರೋಹಿತ್ ಶರ್ಮ 63 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಸಿಡಿಸಿ ಕೊನೆಯ ತನಕ ಹೋರಾಟ ನಡೆಸಿದರೂ ಉಳಿದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ತಿಲಕ್ ವರ್ಮ 31, ಇಶಾನ್ ಕಿಸನ್ 23 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಮತೀಶ ಪತಿರಾಣ 28 ರನ್ ನೀಡಿ 4 ವಿಕೆಟ್ ಉರುಳಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡದ ಪರ ನಾಯಕ ಋತುರಾಜ್ ಗಾಯಕ್ವಾಕ್ 40 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಇದರಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ಗಳಿದ್ದವು. ಶಿವಂ ದುಬೆ 38 ಎಸೆತಗಳಲ್ಲಿ 66 ರನ್ ಸಿಡಿಸಿ ಸಂಭ್ರಮಿಸಿದರು. ಇದರಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ಗಳಿದ್ದವು. ಕೊನೆಯಲ್ಲಿ ಮಹೇಂದ್ರಸಿಂಗ್ ಧೋನಿ ಅಕ್ಷರಷಃ ಸಿಡಿದರು. ಪಂದ್ಯದ ಇನಿಂಗ್ಸ್ನಲ್ಲಿ ಕೊನೆಯ ನಾಲ್ಕು ಎಸೆತಗಳು ಬಾಕಿಯಿದ್ದಾಗ ಧೋನಿ ಕ್ರೀಸ್ಗೆ ಬಂದರು. ಹಾರ್ದಿಕ್ ಪಾಂಡ್ಯ ಹಾಕಿದ ಓವರ್ನಲ್ಲಿ ತಾವೆದುರಿಸಿದ ಮೊದಲ ಮೂರು ಎಸೆತಗಳನ್ನೂ ಸಿಕ್ಸರ್ಗೆತ್ತಿದರು. ಕೊನೆಯ ಎಸೆತದಲ್ಲಿ ಎರಡು ರನ್ ಓಡಿದರು. 5 ಓವರ್ಗಳಲ್ಲಿ 20 ರನ್ ಗಳಿಸಿದರು.