ಸುಳ್ಯ:ಕೋವಿಡ್ -19 ವೈರಾಣುವಿನ ರೂಪಾಂತರಿತ ಜೆಎನ್1 ಕಂಡುಬಂದ ಹಿನ್ನಲೆಯಲ್ಲಿ ಕೊರೋನಾ ಮುಂಜಾಗೃತವಾಗಿ ಸರಕಾರ ರೂಪಿಸುವ ಆದೇಶಗಳನ್ನು ಪಾಲನೆ ಮಾಡಿಕೊಂಡು ಜನರಿಗೆ ಮತ್ತು ಶಬರಿಮಲೆ ಯಾತ್ರಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಇಲಾಖೆಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ ನೀಡಿದ್ದಾರೆ.
ಶಾಸಕರ ಕಚೇರಿಯಲ್ಲಿ ಬುಧವಾರ ನಡೆದ ಕೊರೋನಾ ಮುಂಜಾಗೃತಾ
ಸಭೆಯಲ್ಲಿ ಮಾತನಾಡಿದರು. ಆರೋಗ್ಯ ಇಲಾಖೆಯ ಜೊತೆಗೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಹಕರಿಸಬೇಕು ಎಂದರು. ಶಬರಿಮಲೆ ಯಾತ್ರಿಕರಿಗೆ ತೊಂದರೆ ಆಗಬಾರದು ಎಂದು ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಸುಳ್ಯ ಎಸ್.ಐ. ಈರಯ್ಯ ದೂಂತೂರು ಸುಳ್ಯದ ಮಂಡೆಕೋಲು, ಮೂರೂರು ಮತ್ತು ಕೋಲ್ಚಾರ್ ಮತ್ತಿತರ ಗಡಿ ಪ್ರದೇಶದಲ್ಲಿ ಕೋವಿಡ್ ತಪಾಸಣೆ ಚೆಕ್ ಪೋಸ್ಟ್ಗಳನ್ನು ಸದ್ಯ ಹಾಕಿಲ್ಲ.ಸರಕಾರದ ಆದೇಶ ಬಂದರೆ ಹಾಕಲಾಗುತ್ತದೆ. ಇದಕ್ಕೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು. ಕೋವಿಡ್ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯ ಸಿದ್ಧತಾ ಕ್ರಮ ಕೈಗೊಳ್ಳಲು ತಾಲೂಕಿನ ಖಾಸಗಿ ಆಸ್ಪತ್ರೆ, ಸರಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಕಾರದ ಸೂಚನೆ ಬಂದಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳ ಹೇಳಿದರು.
ವಾಹನ ಪಾರ್ಕಿಂಗ್ ಸುವ್ಯಸ್ಥೆಗೆ ಕ್ರಮ:
ಸುಳ್ಯ ನಗರದ ಪಾರ್ಕಿಂಗ್ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿದೆ. ಎಲ್ಲಾ ಕಡೆಗಳಲ್ಲಿ ರಸ್ತೆಯ ಎರಡು ಕಡೆ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದನ್ನು ಮತ್ತೆ ಸುವ್ಯವಸ್ಥೆಗೆ ಪೊಲೀಸ್ ಇಲಾಖೆ ತರಬೇಕು ಎಂದು ಮಾಜಿ ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಎಸ್.ಐ ಈರಯ್ಯ ಈ ಬಗ್ಗೆ ನಗರದ ರಸ್ತೆಯಲ್ಲಿ ವಾಹನ ಪಾರ್ಕಿಂಗ್ನ್ನು ಸರಿ ಮಾಡುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ತಾ.ಪಂ. ಆಡಳಿತಾಧಿಕಾರಿ ಅಭಿಷೇಕ್ ವಿ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಪ್ರಮುಖರಾದ ಹರೀಶ್ ಕಂಜಿಪಿಲಿ, ಚನಿಯ ಕಲ್ತಡ್ಕ, ವಿನಯ ಕುಮಾರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ಸುನಿಲ್ ಕೇರ್ಪಳ, ಮಹೇಶ್ ಕುಮಾರ್ ಮೇನಾಲ ಮತ್ತಿತ್ತರರು ಉಪಸ್ಥಿತರಿದ್ದರು.










