ಸುಳ್ಯ:ಮೋಡ ಕವಿದ ವಾತಾವರಣ, ಮಳೆಯ ಅಬ್ಬರದ ಬಳಿಕ ಮತ್ತೆ ಪ್ರಕೃತಿಯನ್ನು ಮಂಜಿನ ಕಣಗಳು ಮುತ್ತಿಕೊಂಡಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ ದಟ್ಟ ಮಂಜು ಕವಿದ ವಾತಾವರಣ ಮುದ ನೀಡಿತ್ತು. ಸ್ವಲ್ಪ ಮಟ್ಟಿನ ಚಳಿಯೂ ಇತ್ತು. ಡಿಸೆಂಬರ್ ಕೊನೆಯಲ್ಲಿ ಮತ್ತು ವರ್ಷಾರಂಭದಲ್ಲಿ
ಉತ್ತಮ ಚಳಿಯ ವಾತಾವರಣ ಇದ್ದು ಮಂಜು ಕವಿದ ವಾತಾವರಣ ಇತ್ತು. ಬಳಿಕ ಮೋಡ ಕವಿದ ವಾತಾವರಣ ಬಂದು ಇದರಿಂದ ಮಂಜು ಕರಗಿತು, ಚಳಿ ದೂರವಾಗಿತ್ತು. ಈ ಮಧ್ಯೆ ಭರ್ಜರಿ ಮಳೆಯೂ ಅಬ್ಬರ ಸೃಷ್ಠಿಸಿತು. ಇದೀಗ ಮತ್ತೆ ಚುಮು ಚುಮು ಚಳಿ ಹಾಗೂ ದಟ್ಟ ಮಂಜು ಮುತ್ತಿಕೊಳ್ಳುತಿದೆ.
ಚಳಿ, ಮಂಜು ಮುಸುಕಿದ ಚಿಲ್ ಚಿಲ್ ವಾತಾವರಣ ಮುದ ನೀಡುತಿದೆ. ಬೆಳಿಗ್ಗೆ ಮಂಜು ಪರಸ್ಪರ ಕಾಣದಷ್ಟು ರಸ್ತೆಯನ್ನು ಮಬ್ಬಾಗಿಸಿತ್ತು.ಈ ವಾತಾವರಣ ಸಾಕಷ್ಟು ಮಂದಿಯನ್ನು ಫುಳುಕಿತಗೊಳಿಸಿತು.ವಾಯು ವಿಹಾರ, ವಾಕಿಂಗ್, ಜಾಗಿಂಗ್ ಕ್ರೇಜ್ ಹವ್ಯಾಸ ಇದ್ದವರಿಗೆ ಬೆಳಗಿನ ಮಂಜಿನ ಚೆಲ್ಲಾಟ ಉಲ್ಲಾಸ ನೀಡಿತು.

ಬೆಳಗ್ಗೆ 6 ರಿಂದಲೇ ಮಂಜು ಇದ್ದು 7ರ ಸುಮಾರಿಗೆ ದಟ್ಟವಾಗಿ ಹರಡಿತ್ತು. 8 ಗಂಟೆಯವರೆಗೂ ಸುತ್ತಲೂ ಬಿಳಿ ಮಂಜು ಆವರಿಸಿ ಪರಿಸರವಿಡೀ ಹಾಲ್ನೊರೆ ಸುರಿದಂತೆ ಭಾಸವಾಗುತ್ತಿತ್ತು.ನಿನ್ನೆ ಮೊನ್ನೆ ತನಕ ಮಳೆಯ ವಾತಾವರಣ ಇದ್ದು ಇದೀಗ ಒಮ್ಮಿಂದೊಮ್ಮೆಲೇ ಮಂಜು ಆವರಿಸಿ ಪರಿಸರವಿಡೀ ಅಪರೂಪದ ದೃಶ್ಯ ಕಾವ್ಯ ಸೃಷ್ಠಿಸಿತು.
ಲರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಚಳಿಯ ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸುಳ್ಯ ಹಾಗೂ ಪರಿಸರದಲ್ಲಿ ಎರಡು ದಿನಗಳಿಂದ ಒಣ ಹವೆ ಮತ್ತು ಬೆಳಗ್ಗಿನ ಜಾವ ಸ್ವಲ್ಪ ಚಳಿಯ ವಾತಾವರಣ ಇದೆ.ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಾಗು ಗಡಿ ಗ್ರಾಮಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಒಂದೆರಡು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಚುಮು ಚುಮು ಚಳಿಯ ಅನುಭವ ಉಂಟಾಗುತ್ತಿದೆ.












