ಸುಳ್ಯ: ಸುಳ್ಯ ಕಾಂಗ್ರೆಸ್ನ ಆಂತರಿಕ ಕಲಹ ಹಾಗೂ ಭಿನ್ಮಾಭಿಪ್ರಾಯ ತೀವ್ರಗೊಂಡಿದ್ದು ವಿಧಾನಸಭಾ ಚುನಾವಣೆ ಸಂದರ್ಭ ಟಿಕೆಟ್ ವಿಚಾರದಲ್ಲಿ ಉಂಟಾದ ಆಂತರಿಕ ಗೊಂದಲ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕವೂ ಮುಂದುವರಿದಿದೆ. ಇದೀಗ ಸುಳ್ಯ ಮತ್ತು ಕಡಬ ಬ್ಲಾಕ್ನ ಹಲವು ನಾಯಕರನ್ನು ಉಚ್ಛಾಟನೆ ಮಾಡಿದ ಹಾಗೂ ಪ್ರಮುಖ ನಾಯಕರಿಗೆ ಶೋಕಾಸ್ ನೋಟೀಸ್ ನೀಡಿರುವುದು ಹೊಸ ವಿವಾದಕ್ಕೆ
ಕಾರಣವಾಗಿದೆ. ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ ಮತ್ತು ಪಕ್ಷದ ಆಂತರಿಕ ಅಸಮಾಧಾನ ತೀವ್ರಗೊಳ್ಳಲು ಕಾರಣವಾಗಿದೆ. ಅಮಾನತು ಪಟ್ಟಿಯಲ್ಲಿರುವ ಹಾಗೂ ಶೋಕಾಸ್ ನೋಟೀಸ್ ನೀಡಲಾಗುವುದು ಎಂದು ಹೆಸರಿಸಲಾಗಿರುವ ನಾಯಕರು ಜೂ.13 ರಂದು ಸಭೆ ನಡೆಸಿ ಅಮಾನಾತು ಹಾಗೂ ಶೋಕಾಸ್ ನೋಟೀಸ್ ವಿಚಾರ ಚರ್ಚೆ ನಡೆಸಲಾಗಿದೆ. ಮಹೇಶ್ ಕುಮಾರ್ ಕರಿಕ್ಕಳ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಸಭೆಯಲ್ಲಿ ಸೇರಿದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸುಳ್ಯ ಕಾಂಗ್ರೆಸಿನಲ್ಲಿನ ನೈಜ ವಿಚಾರಗಳನ್ನು ಮನದಟ್ಟು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ಬದಲಾವಣೆ ಮಾಡಿ ಹೊಸ ಅಧ್ಯಕ್ಷರ ನೇಮಕ ಮಾಡಬೇಕು, ಹೆಚ್.ಎಂ.ನಂದಕುಮಾರ್ ಅವರಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ತಿಳಿಸಿದ್ದಾರೆ. ನಂದಕುಮಾರ್ ಅಭಿಮಾನಿಗಳು ಒಟ್ಟಾಗಿ ಸಮಾವೇಶ ನಡೆಸಬೇಕು ಎಂದು ನಿರ್ಧಾರ ಸಭೆಯಲ್ಲಿ ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.
ಶೋಕಾಸ್ ನೋಟೀಸು ಸಿಕ್ಕಿದವರು, ಅಮಾನಾತು ಆದವರು ಚಿಂತೆ ಮಾಡಬೇಡಿ, ಹೈಕಮಾಂಡ್ ಜೊತೆ ಮಾತನಾಡಿ ನೈಜ ವಿಚಾರ ತಿಳಿಸುವ, ನಿಮ್ಮೊಂದಿಗೆ ನಾನಿದ್ದೇನೆ ಎಂದು ಶೋಕಾಸ್ ನೋಟೀಸು ಪಡೆದವರಿಗೆ ಹೆಚ್.ಎಂ ನಂದಕುಮಾರ್ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ನಾಯಕರಾದ ಬಾಲಕೃಷ್ಣ ಬಳ್ಳೇರಿ, ಮಹೇಶ್ ಕುಮಾರ್ ಕರಿಕ್ಕಳ, ಎಚ್.ಎಂ. ನಂದಕುಮಾರ್, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಕೆ. ಗೋಕುಲ್ದಾಸ್, ಸಚಿನ್ ರಾಜ್ ಶೆಟ್ಟಿ ಪೆರುವಾಜೆಗುತ್ತು, ಆಶಾ ಲಕ್ಷ್ಮಣ್, ಶಶಿಧರ ಎಂ.ಜೆ, ಮೊಹಮ್ಮದ್ ಪೈಝಲ್, ಭವಾನಿ ಶಂಕರ ಕಲ್ಮಡ್ಕ, ಚೇತನ್ ಕಜಗದ್ದೆ, ಬಶೀರ್ ಅಹ್ಮದ್, ರವೀಂದ್ರ ಕುಮಾರ್ ರುದ್ರಪಾದ, ಜಗನ್ನಾಥ ಪೂಜಾರಿ ಮುಕ್ಕೂರು, ಕಮಲಾಕ್ಷ ಪಿ, ಶೇಖರ, ರಾಮಕೃಷ್ಣ ಡಿ ಹೊಳ್ಳಾರು, ಶೋಭಿತ್ ಎಂ. ನಾರಾಯಣ, ಗೋಪಾಲಕೃಷ್ಣ ಭಟ್ ನೂಚಿಲ, ಬಾಲಕೃಷ್ಣ ಮರೀಲ್, ಕ್ಷೇವಿಯರ್ ಬೀಬಿ, ಸಂದೇಶ್ ಚಾರ್ವಕ ಮೊದಲಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.