ಸುಳ್ಯ:ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಾಗಾರ ಜೂ.13ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಾಗಾರದಲ್ಲಿ ಮಾಹಿತಿ ನೀಡಿದ ರಾಜೀವ್ ಗಾಂಧೀ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಸರಕಾರದ ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದು ಇದನ್ನು ಮನೆ ಮನೆ ತಲುಪಿಸುವ ನಿಟ್ಟಿನಲ್ಲಿ
ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿ ವಲಯಗಳಲ್ಲಿ ಜೂ.15ರಿಂದ ಇಂದಿರಾ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇಲ್ಲಿ ಯೋಜನಗೆಗಳಿಗೆ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪ್ರಸ್ತುತವಿರುವ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಗೆ ನೊಂದಾವಣೆ ಮಾಡಿಕೊಳ್ಳಬೇಕಾಗಿದೆ. ನೊಂದಾವಣೆಗೆ ಆವಶ್ಯಕವಾದ ದಾಖಲೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂಬುದನ್ನು ಕಾರ್ಯಕರ್ತರ ಮತದಾರರಿಗೆ ತಿಳಿಸುವ ಕೆಲಸವಾಗಬೇಕು. ಅದಕ್ಕಾಗಿ ವಲಯ ಕಾಂಗ್ರೆಸ್, ಬೂತ್ ಮಟ್ಟದಲ್ಲಿ ನೋಂದಾವಣಿಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕಾ ಘಟಕದ ಅಧ್ಯಕ್ಷ ಲಾರೆನ್ಸ್ ಡಿ ಸೋಜ ಮಾತನಾಡಿ, ಗ್ಯಾರಂಟಿ ಯೋಜನೆಯ ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳ ಪಡೆದುಕೊಳ್ಳಬೇಕಾದರೆ ಫಲಾನುಭವಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಾಗಿದೆ. ಅರ್ಜಿ ಸಲ್ಲಿಸದವರಿಗೆ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.ಉಚಿತ ಬಸ್ ಪ್ರಯಾಣಕ್ಕೆ ಸದಸ್ಯಕ್ಕೆ ಇತರ ದಾಖಲೆ ತೋರಿಸಿ ಪ್ರಯಾಣಿಸಬಹುದು. ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ಗೃಹಲಕ್ಷ್ಮಿಗೆ ಜೂ.15ರಿಂದ ಜು.15ರ ತನಕ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಇದರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಪ್ರಯೋಜನ ಪಡೆದುಕೊಳ್ಳಬೇಕು.ಸೇವಾ ಕೇಂದ್ರ, ಸೈಬರ್ ಸೆಂಟರ್ಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಕಂದಾಯ ಇಲಾಖೆ, ಅಂಗನವಾಡಿ ಕಾರ್ಯಕರ್ತರನ್ನು ಇದಕ್ಕೆ ನಿಯೋಜನೆ ಮಾಡುತ್ತಾರೆ. ಅನ್ನಭಾಗ್ಯ ನಿರಂತರ ಪ್ರಕ್ರಿಯೆಯಾಗಿದ್ದು ಮುಂದುವರಿಯಲಿದೆ. ಗೃಹಜ್ಯೋತಿಯಲ್ಲಿ ಫಲಾನುಭವಿಗಳ ಹೆಸರಿನಲ್ಲಿಯೇ ಖಾತೆ ಹೊಂದಿರಬೇಕು. ಗೃಹಲಕ್ಷ್ಮಿಯಲ್ಲಿ ತೆರಿಗೆ ಪಾವತಿ ಮಾಡುವವರಿಗೆ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ. ನೋಂದಾವಣೆ ಪ್ರಕ್ರಿಯೆಗಳು ಸರಳೀಕರಣಗೊಂಡು ಮುಂದೆ ಮೊಬೈಲ್ ಮೂಲಕ ನೋಂದಾವಣೆಗೆ ಅವಕಾಶ ದೊರೆತಾಗ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮಾಡಲು ಅವಕಾಶವಿದೆ.ಯಾವುದೇ ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗುವುದು ಎಂದು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಪಿಸಿಸಿ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಪಿ.ಎಸ್.ಗಂಗಾಧರ, ಪಿ.ಎ.ಮಹಮ್ಮದ್, ಶೌವಾದ್ ಗೂನಡ್ಕ, ಜಯಪ್ರಕಾಶ್ ನೆಕ್ರಪ್ಪಾಡಿ, ದಿನೇಶ್ ಅಂಬೆಕಲ್ಲು, ಶಾಫಿ ಕುತ್ತಮೊಟ್ಟೆ ಧೀರಾ ಕ್ರಾಸ್ತಾ ಸೇರಿದಂತೆ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಅಶೋಕ್ ಚೂಂತಾರು ಸ್ವಾಗತಿಸಿ, ಎನ್ಎಸ್ಯುಐ ತಾಲೂಕು ಅಧ್ಯಕ್ಷ ಕೀರ್ತನ್ ಕೊಡಪಾಲ ವಂದಿಸಿದರು.