ಬೆಳಗಾವಿ: ರಾಜ್ಯದ ನಿರುದ್ಯೋಗಿ ಪದವೀಧರರಿಗೆ 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ರೂ.1,500 ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳವರೆಗೆ, ಪ್ರತಿ ತಿಂಗಳು ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದರು.
ನಗರದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶದಲ್ಲಿ, ಪಕ್ಷದ ನಾಲ್ಕನೇ ಭರವಸೆಯಾಗಿ ‘ಯುವನಿಧಿ’ ಕಾರ್ಡ್ಗಳನ್ನು ಅವರು ಬಿಡುಗಡೆ ಮಾಡಿದರು.
‘ರಾಜ್ಯದ ಬಿಜೆಪಿ ಸರ್ಕಾರ ಯುವಜನರಿಗೆ ಉದ್ಯೋಗ ನೀಡುವಲ್ಲಿ

ವಿಫಲವಾಗಿವೆ. ಹೀಗಾಗಿ, ಯುವಜನರಿಗೆ ಭದ್ರ ಭವಿಷ್ಯ ಕಟ್ಟಿಕೊಡಲು ಕಾಂಗ್ರೆಸ್ ಮುಂದಾಗಿದೆ. ನಿರುದ್ಯೋಗದಿಂದ ತತ್ತರಿಸಿದ ಯುವ ಸಮುದಾಯಕ್ಕೆ ಭರವಸೆಯ ಬೆಳಕಾಗಿ ಯುವನಿಧಿ ನೀಡುತ್ತಿದ್ದೇವೆ’ ಎಂದರು. ‘ನಮ್ಮ ಘೋಷಣೆ ಇಷ್ಟಕ್ಕೇ ನಿಲ್ಲುವುದಿಲ್ಲ. ರಾಜ್ಯದಲ್ಲಿ ಇನ್ನೂ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದು ವರ್ಷದೊಳಗೆ ಈ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡುತ್ತೇವೆ. ಯುವ ಸಶಕ್ತೀಕರಣವೇ ನಮ್ಮ ಮೊದಲ ಹೆಜ್ಜೆ ಆಗಲಿದೆ. ನಿರುದ್ಯೋಗದಿಂದ ಕಾಂಗಾಲಾದವರಿಗೆ ಆರ್ಥಿಕ ಶಕ್ತಿ ನೀಡುತ್ತೇವೆ’ ಎಂದೂ ಭರವಸೆ ನೀಡಿದರು.‘ಈಗಾಗಲೇ ಮಹಿಳೆಯರಿಗಾಗಿ ಪ್ರತಿ ತಿಂಗಳು 2,000 ನೆರವು, 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಉಚಿತ ನೀಡುವ ಗ್ಯಾರಂಟಿ ಕೊಟ್ಟಿದ್ದೇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಬಂದಾಗಿನಿಂದ ಯುವ ಸಮುದಾಯವನ್ನು ನಿರ್ಲಕ್ಷ್ಯ ಮಾಡಿವೆ. ಹೀಗಾಗಿ, ಕಾಂಗ್ರೆಸ್ ನಿಮಗಾಗಿಯೇ ಪ್ರತ್ಯೇಕ ಯೋಜನೆ ರೂಪಿಸಿದೆ’ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು