ಸುಳ್ಯ:ಮಂಗಳೂರಿನಲ್ಲಿ ಜ.21ರಂದು ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶದ ಅಂಗವಾಗಿ ಈಗಾಗಲೇ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಲಾಗುದೆ. ಪ್ರತೀ ಬ್ಲಾಕ್ ಗಳಲ್ಲಿ ಸಭೆ ನಡೆಸಲು ಸೂಚಿಸಲಾಗಿದ್ದು, ಅದರಂತೆ ಇಂದು ಸುಳ್ಯದಲ್ಲಿ ಸಭೆ ನಡೆಸಲಾಗಿದೆ. ಮಂಗಳೂರಿನಲ್ಲಿ ನಡೆಯುವ ಸಮಾವೇಶ ಮುಂಬರುವ ಚುನಾವಣೆಗೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಪೂರಕವಾಗಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ ಕುಮಾರ್ ಸೊರಕೆ ತಿಳಿಸಿದರು.
ಅವರು ಸುಳ್ಯ ಪ್ರಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಎಐಸಿಸಿ ನಿರ್ದೇಶನದಂತೆ ರಾಜ್ಯಮಟ್ಟದಲ್ಲಿ ಸಮಾವೇಶ ಮಂಗಳೂರಿನಲ್ಲಿ
ನಡೆಯಲಿದೆ. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಸಚಿವರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು. ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಕಾಂಗ್ರೆಸ್ ನಿರೀಕ್ಷೆಯಷ್ಟು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಕಾಂಗ್ರೆಸ್ನ್ನು ಇಲ್ಲಿಂದಲೇ ಗಟ್ಟಿಯಾಗಿ ಸಂಘಟಿಸಲು ಪೂರಕವಾಗಿ ಸಮಾವೇಶ ನಡೆಯಲಿದೆ ಎಂದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ಎಚ್ಚರಿಕೆಯಿಂದ ನಡೆಯಲಿದೆ. ಪಕ್ಷ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಫೆ.10ರ ಒಳಗೆ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆ ಎಂದರು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲುವು ಸಾಧ್ಯವಾಗಲಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಕ್ಷೇತ್ರವನ್ನು ಗೆಲ್ಲಲು ಸಾಧ್ಯ ಎಂದರು.

ಧರ್ಮ, ದೇವರ ಹೆಸರಲ್ಲಿ ರಾಜಕೀಯ ಮಾಡುವುದಿಲ್ಲ:ಪಿ.ಸಿ.ಜಯರಾಮ ಪ್ರಶ್ನೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ’
ಆಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ ದಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಸರಕಾರ ಆದೇಶ ನೀಡಿದೆ. ಅದನ್ನು ನಾವೆಲ್ಲ ಸ್ವಾಗತಿಸಿದ್ದೇವೆ. ಮತ್ತು ಕಾಂಗ್ರೆಸ್ನ ಹಿಂದೂ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಸೂಚಿಸಿದ್ದೇವೆ. ಅದು ನಮ್ಮ ನಂಬಿಕೆ, ಧರ್ಮವನ್ನು ನಾವು ಪಾಲಿಸುತ್ತೇವೆ ಎಂದು ಹೇಳಿದರು. ಆದರೆ ಇದನ್ನೇ ಬಿಜೆಪಿಯವರು ಪ್ರಶ್ನಿಸುತ್ತಿದ್ದಾರೆ ಅಂದರೆ ಬಿಜೆಪಿಯವರದ್ದು ಮಾತ್ರ ನೈಜ ಭಕ್ತಿಯೋ, ಬಿಜೆಪಿಯವರಿಗೆ ಮಾತ್ರ ರಾಮ ಇರುವುದಾ, ಕಾಂಗ್ರೆಸ್ ನ ಹಿಂದುಗಳು ನೈಜ ಭಕ್ತರಲ್ಲವೇ, ಕಾಂಗ್ರೆಸ್ನ ಹಿಂದುಗಳಿಗೆ ರಾಮ ದೇವರಲ್ಲವೇ ಎಂದು ಪ್ರಶ್ನಿಸಿದ ಅವರು ನಾವೇ ನಿಜವಾದ ರಾಮಭಕ್ತರು. ಧರ್ಮ, ದೇವರ ಹೆಸರಿನಲ್ಲಿ ಕಾಂಗ್ರೆಸ್ ಎಂದೂ ರಾಜಕೀಯ ಮಾಡುವುದಿಲ್ಲ. ಕಾಂಗ್ರೆಸ್ನವರು ನೈಜ ಭಕ್ತರು ಎಂದು ಹೇಳಿದರು.

ಧರ್ಮವನ್ನು ರಾಜಕೀಯಕ್ಕೆ ಬಳಸಬಾರದು-ಭರತ್ ಮುಂಡೋಡಿ:
ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಮಾತನಾಡಿ’ ಬಿಜೆಪಿಯವರು ಧರ್ಮವನ್ನು ರಾಜಕೀಯಕ್ಕೆ ಬಳಸಿ, ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದನ್ನು ಜನರು ಈಗ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಧರ್ಮದಲ್ಲಿ ರಾಜಕೀಯ ಇರಬಾರದು ಆದರೆ ರಾಜಕೀಯದಲ್ಲಿ ಧರ್ಮ ಪಾಲಿಸಬೇಕು ಎಂದು ಹೇಳಿದರು.
ಲಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕೆಪಿಸಿಸಿ ಸದಸ್ಯೆ ಸರಸ್ವತಿ ಕಾಮತ್, ಮುಖಂಡರಾದ ಎಂ.ವೆಂಕಪ್ಪ ಗೌಡ, ರಾಜೀವಿ ಆರ್.ರೈ, ಅಶೋಕ್ ಚೂಂತಾರು, ಸುಜಯ ಕೃಷ್ಣ ಉಪಸ್ಥಿತರಿದ್ದರು.









