ಮಂಗಳೂರು: ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು. ಅದಕ್ಕೆ ಪಕ್ಷದ ನಾಯಕರು, ಕಾರ್ಯ ಕರ್ತರು ಶ್ರಮಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮಂಗಳೂರಿನ ಅಡ್ಯಾರ್ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕರ್ತರು ಕಾಂಗ್ರೆಸ್ ನೀಡಿದ, ಮಾಡಿದ ಸಾಧನೆಗಳನ್ನೂ ಜನರಿಗೆ
ತಿಳಿಸಬೇಕು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ, ಬಜೆಟ್ ನೋಡಿದ ಮೇಲೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದ್ದೇವೆ. ಅದಕ್ಕೆ ತಳ ಹಂತದ ಕಾರ್ಯಕರ್ತರು ಹೊಣೆಗಾರಿಕೆಬೇಕು. ಮಂಗಳೂರು, ಉಡುಪಿ, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿ ಸೀಟು ಗೆಲ್ಲಬೇಕು ಎಂದು ಅವರು ಕರೆ ನೀಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ಸರಕಾರ ನೀಡಿದ ಗ್ಯಾರಂಟಿ ಯೋಜನೆ ಮತ್ತು ಬಜೆಟ್ಗಳಿಂದ ರಾಜ್ಯದ ಜನ ಈ ಬಾರಿ ಕಾಂಗ್ರೆಸ್ಗೆ 20 ಸ್ಥಾನ ಗೆಲ್ಲಿಸಿಕೊಡ್ತಾರೆ ಅನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ತಮ್ಮ ಎಂದಿನ ಶೈಲಿಯಲ್ಲಿ ಭಾಷಣೆ ಮಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಕಾರ್ಯಕ್ರಮ ದೇಶದ ಎಲ್ಲಾ ಜನರ ಕಾರ್ಯಕ್ರಮವಾಗಿದೆ. ಈ ಭಾಗದ ಜನ ದೇಶಕ್ಕೆ ಶಕ್ತಿ ತುಂಬಿದ್ದಾರೆ ಎಂದರು.
ಕಾರ್ಯಕರ್ತರು ನಮ್ಮ ಯೋಜನೆ ಜಾರಿಯಿಂದಾಗಿ ಆತ್ಮವಿಶ್ವಾಸದಿಂದ ಜನರ ಮುಂದೆ ಹೋಗಿ ಮತ ಕೇಳಬಹುದು. ದೇಶದಲ್ಲಿ ಯಾವುದೇ ಸರ್ಕಾರ ಈ ರೀತಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಮೊದಲಾದವರು ಮಾತನಾಡಿದರು.
ರಾಜ್ಯದ ಗೃಹ ಸಚಿವ ಡಾ. ಪರಮೇಶ್ವರ್, ಎಂಎಲ್ಸಿ ಬಿ.ಕೆ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ, ಸಚಿವರಾದ ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಸುಧಾಕರ್, ಕೆ. ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ. ಜಾರ್ಜ್, ಮಧು ಬಂಗಾರಪ್ಪ, ಶಾಸಕ ಆರ್.ವಿ. ದೇಶಪಾಂಡೆ, ಮಾಜಿ ಸಚಿವರಾದ ಮೋಟಮ್ಮ, ಟಿ.ಬಿ. ಜಯಚಂದ್ರ, ರಮಾನಾಥ ರೈ, ಆಂಜನೇಯ, ಮಾಜಿ ಎಂಪಿ ಉಗ್ರಪ್ಪ, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕ ಅಶೋಕ್ ರೈ, ಮುಖಂಡರಾದ ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ವಿನಯ ಕುಮಾರ್ ಸೊರಕೆ, ಮಿಥುನ್ ರೈ, ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರು, ಜಿಲ್ಲೆ, ರಾಜ್ಯದ ನಾಯಕರು ಇದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಡ್ರಾ. ಮಂಜುನಾಥ ಭಂಡಾರಿ ಮತ್ತು ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.









