ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಸಭೆ ಇಂದು ಸುಳ್ಯದ ಸದರ್ನ್ ರೆಸಿಡೆನ್ಸಿಯಲ್ಲಿ ನಡೆಯಲಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಮಮತಾ ಗಟ್ಟಿ ಹಾಗೂ ಇತರ ನಾಯಕರು ಭಾಗವಹಿಸಲಿದ್ದಾರೆ. ಮುಂಬರುವ
ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆಯ ಹಿನ್ನಲೆಯಲ್ಲಿ ಸಭೆ ಕರೆಯಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಸೋಲು ಬಳಿಕದ ಬೆಳವಣಿಗೆಗಳು, ಕೆಲವು ಮುಖಂಡರಿಗೆ ಶೋಕಾಸ್ ನೋಟೀಸ್ ನೀಡಿರುವುದು, ಕೆಲವು ಕಾರ್ಯಕರ್ತರನ್ನು ಉಚ್ಚಾಟನೆ,ಅಮಾನತು ಮಾಡಿರುವ ವಿಚಾರ ಸಭೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಕಾಂಗ್ರೆಸ್ನ ಒಂದು ಬಣ ಸುಳ್ಯದಲ್ಲಿ ಪ್ರತ್ಯೇಕ ಸಭೆ ನಡೆಸಿ ಕಾಂಗ್ರೆಸ್ ಉಳಿಸಿ ಆಂದೋಲನ ಆರಂಭಿಸಿತ್ತು. ಇದು ಕೂಡ ಚರ್ಚೆಯಾಗುವ ಸಾಧ್ಯತೆ ಇದೆ. ಕಡಬದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಪರಸ್ಪರ ವಾಗ್ವಾದ, ಗದ್ದಲಕ್ಕೆ ಕಾರಣವಾಗಿತ್ತು. ಒಟ್ಟಿನಲ್ಲಿ ಸುಳ್ಯದಲ್ಲಿ ನಡೆಯುವ ಕಾಂಗ್ರೆಸ್ ಸಭೆ ತೀವ್ರ ಕುತೂಹಲ ಕೆರಳಿಸಿದೆ.