ಸುಳ್ಯ: ಸುಳ್ಯ ನಗರ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಡೆದಿರುವ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಆಡಳಿತ ಪಕ್ಷದ ನಾಮ ನಿರ್ದೇಶಿತ ಸದಸ್ಯ ವಿಪಕ್ಷ ಸದಸ್ಯರ ಮೇಲೆರಗಿ ಬರುವುದು ಪ್ರತಿಭಟನೆಯನ್ಬು ಹತ್ತಿಕ್ಕುವ ಪ್ರಯತ್ನ ಇದು ಖಂಡನೀಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರ ಪಂಚಾಯತ್ ಆಡಳಿತವನ್ನು ಮುನ್ನಡೆಸಲು ಮತ್ತು ಸಭೆಯನ್ನು ನಿಯಂತ್ರಿಸಲು ನಗರ ಪಂಚಾಯತ್ ಅಧ್ಯಕ್ಷರು ಸಂಪೂರ್ಣ ವಿಫಲರಾಗಿದ್ದಾರೆ. ನ್ಯಾಯಯುತ ಬೇಡಿಕೆಯನ್ನು ಮುಂದಿರಿಸಿ ನಗರ
ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ನಾಮ ನಿರ್ದೇಶಿತ ಸದಸ್ಯರು ಅವರ ಮೇಲೆರಗಿ ಬರುವುದನ್ನು ತಡೆಯಲು, ಅದನ್ನು ನಿಯಂತ್ರಿಸಲು ಅಧ್ಯಕ್ಷರು ವಿಫಲರಾಗಿದ್ದಾರೆ. ಅಧಿಕಾರಿಗಳು ಇಲ್ಲದೆ, ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದೆ ಜನರು ಬೇಷತ್ತು ಹೋಗಿದ್ದಾರೆ. ಇದನ್ನು ಪ್ರಶ್ನಿಸುವುದು, ಆಗದೇ ಇದ್ದಾಗ ಪ್ರತಿಭಟಿಸುವುದು ವಿರೋಧ ಪಕ್ಷಗಳ ಕರ್ತವ್ಯ. ಚುನಾವಣೆಯಲ್ಲಿ ಗೆದ್ದ ಸದಸ್ಯರ ಕರ್ತವ್ಯಕ್ಕೆ ನಾಮನಿರ್ದೇಶಿತ ಸದಸ್ಯರು ಅಡ್ಡಿಪಡಿಸಲು ಮುಂದಾಗಿರುವುದು ಅಕ್ಷಮ್ಯ ಎಂದು ಹೇಳಿದರು. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆ, ಬೀದಿ ದೀಪಗಳ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಅವರು ಹೇಳಿದರು.

ಟೆಂಡರ್ ವ್ಯವಸ್ಥೆಯಂತೆ ಕಸ ಸಾಗಾಟ ಆಗಿಲ್ಲ- ಗೋಕುಲ್‌ದಾಸ್:
ನಗರ ಪಂಚಾಯತ್ ಸುತ್ತ ಮುತ್ತ ಇರುವ ಎಲ್ಲಾ ಕಸವನ್ನು ಸಾಗಾಟ ಮಾಡಬೇಕು ಎಂದು ಟೆಂಡರ್ ಆಗಿದ್ದರೂ ಕೆಲವು ಲೋಡ್ ಕಸ ಮಾತ್ರ ಸಾಗಾಟ ಮಾಡಿ 8.29 ಲಕ್ಷ ಪಾವತಿಯಾಗಿದೆ. ಆದರೆ ಟೆಂಡರ್ ವ್ಯವಸ್ಥೆಯ ಪ್ರಕಾರ ಕಸ ಸಾಗಾಟ ಆಗಿಲ್ಲ ಎಂದು ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಗೋಕುಲ್‌ದಾಸ್ ಹೇಳಿದ್ದಾರೆ. ಹಸಿ ಕಸ ಎಲ್ಲಿಗೆ ಸಾಗಾಟ ಆಗುತಿದೆ ಎಂಬ ಬಗ್ಗೆ ನಗರ ಪಂಚಾಯತ್ ಸಾರ್ವಜನಿಕರಿಗೆ ಮಾಹಿತಿ ಪ್ರತಿ ತಿಂಗಳು ಹಸಿ ಕಸದ ಸಾಗಾಟಕ್ಕೆ 45 ಸಾವಿರ ರೂ ಪಾವತಿಸಲಾಗುತ್ತದೆ. ಹಸಿ ಕಸ ಸಾಗಾಟಕ್ಕೆ ಟೆಂಡರ್ ನಡೆಸಬೇಕು ಎಂದು ಗೋಕುಲ್‌ದಾಸ್ ಆಗ್ರಹಿಸಿದರು.
ಮಳೆ ಹಾನಿಗೆ ತಾತ್ಕಾಲಿಕ ತೇಪೆಯಿಂದ ಸಂಕಷ್ಟ-ಭರತ್ ಮುಂಡೋಡಿ
ಮಳೆಗಾಲದಲ್ಲಿ ಮಳೆ ಹಾನಿಯಿಂದ ಸುಳ್ಯ ತಾಲೂಕಿನಲ್ಲಿ ಅತೀ ಹೆಚ್ಚು ನಷ್ಟ ಆಗಿದೆ. ರಸ್ತೆ, ಸೇತುವೆ ಸೇರಿದಂತೆ ಭಾರೀ ದೊಡ್ಡ ನಷ್ಟ ಉಂಟಾಗಿದೆ. ಆದರೆ ಈಗ ಹಾನಿಯಾಗಿರುವ ಕಡೆಗಳಲ್ಲಿ ತಾತ್ಕಾಲಿಕವಾಗಿ ದುರಸ್ಥಿ ಪಡಿಸುವ ಕೆಲಸವಷ್ಟೇ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಭರತ್ ಮುಂಡೋಡಿ ಹೇಳಿದರು. ತಾತ್ಕಾಲಿಕ ತೇಪೆ ಮುಂದಿನ ಮಳೆಗಾಲದ ವೇಳೆಗೆ ನಾಶವಾಗಿ ಜನರಿಗೆ ಮತ್ತೆ ಸಂಕಷ್ಟ ಎದುರಾಗುವ ಸಂಭವ ಇದೆ. ಕ್ಷೇತ್ರದ ಮಳೆ ಹಾನಿಯ ಸಮಸ್ಯೆಯನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದು 500 ಕೋಟಿ ವಿಶೇಷ ಪ್ಯಾಕೇಜ್ ತರುವ ಕೆಲಸವನ್ನು ಸಚಿವ ಅಂಗಾರ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ಪ್ರಯತ್ನ ನಡೆಸದೇ ಇದ್ದದು ದುರದೃಷ್ಟಕರ ಎಂದು ಅವರು ಹೇಳಿದರು.ಮಾವಿನಕಟ್ಟೆ-ಕೊಲ್ಲಮೊಗ್ರ ರಸ್ತೆ 1988ರಲ್ಲಿ ನಾನು ಜಿಲ್ಲಾಪರಿಷತ್ ಸದಸ್ಯನಾಗಿದ್ದ ಸಂದರ್ಭದಲ್ಲಿ ಡಾಮರೀಕರಣ ಮಾಡಿಸಿದ್ದೆ ಆ ಬಳಿಕ 34 ವರ್ಷ ರಸ್ತೆಗೆ ಯಾವುದೇ ಅನುದಾನ ಇರಿಸಿಲ್ಲ. ಈ ವರ್ಷ 30 ಲಕ್ಷ ಲಅನುದಾನ ಇರಿಸಿದ್ದಾರೆ. ಕಳೆದ 28 ವರ್ಷಗಳಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಶಾಸಕರು ಕಡೆಗಣಿಸಿದ್ದಾರೆ ಎಂದು ಭರತ್ ಮುಂಡೋಡಿ ಆರೋಪಿಸಿದರು
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಅಬ್ದುಲ್ ಗಫೂರ್ ಕಲ್ಮಡ್ಕ, ಸುರೇಶ್ ಎಂ.ಎಚ್, ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.