ಸುಳ್ಯ:ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ದಿನ ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ರಾಜ್ಯ ಸರಕಾರ ಹೊರಡಿಸಿದ ಸುತ್ತೋಲೆಯನ್ನು ಸ್ವಾಗತಿಸಿರುವ ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮಗಳಲ್ಲಿ ಎಲ್ಲಾ ಕಾರ್ಯಕರ್ತರೂ ಪಾಲ್ಗೊಂಡು ದೇವಸ್ಥಾನಗಳಲ್ಲಿ ಆಯಾ ಭಾಗದ ಕಾರ್ಯಕರ್ತರು ಸೇರಿ ವಿಶೇಷ ಪೂಜೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ ಹೇಳಿದರು. ಸುಳ್ಯ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಸರಕಾರದ
ಈ ಆದೇಶವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಸ್ವಾಗತಿಸುತ್ತದೆ. ಅಂದು ಸುಳ್ಯದ ಶ್ರೀರಾಮ ಭಜನಾ ಮಂದಿರದಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದರು.
ಶ್ರೀ ರಾಮಚಂದ್ರ ರಾಜಧರ್ಮ ಪಾಲಿಸಿದ ಮಹಾನ್ ವ್ಯಕ್ತಿತ್ವ. ಗಾಂಧೀಜಿ ಹೇಳಿದ ರಾಮರಾಜ್ಯದಲ್ಲೂ ಎಲ್ಲರೂ ಸಮಾನರೆಂಬ ಭಾವನೆ ಇತ್ತು. ಶ್ರೀರಾಮ ರಾಜ ಧರ್ಮದ ಪ್ರತೀಕ. ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳನ್ನು ಎಲ್ಲಾ ಪಕ್ಷಗಳೂ ಮಾಡುತ್ತವೆ. ಎಲ್ಲ ಪಕ್ಷಗಳೂ ಲಾಭ ಪಡೆಯಲಿ. ಇಂದು ರಾಮ ಮಂದಿರ ಮೋದಿಯವರ ಕಾಲದಲ್ಲಾದರೆ, ಅಂದು ಬೀಗ ತೆಗೆಸಿ ಪೂಜೆಗೆ ಅನುಮತಿ ನೀಡಿದ್ದು, ಶಿಲಾನ್ಯಾಸ ರಾಜೀವ್ ಗಾಂಧಿಯವರ ಕಾಲದಲ್ಲಿ ಆಗಿದೆ. ಹಾಗಾಗಿ ಹಿಂದೂಗಳ ಭವ್ಯ ಕ್ಷೇತ್ರವಾಗಿ ಬೆಳಗುವ ಅಯೋಧ್ಯೆಯ ಈ ಕಾರ್ಯಕ್ರಮಕ್ಕೆ ನಾವು ಪೂರ್ಣ ಸಹಕಾರ ನೀಡುತ್ತೇವೆ ಎಂದು ಜಯಪ್ರಕಾಶ್ ರೈ ಹೇಳಿದರು.

ಜ.21ರಂದು ಮಂಗಳೂರಿನಲ್ಲಿ ಸಮಾವೇಶ :
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು 9 ತಿಂಗಳು ಪೂರೈಸಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿ ಚುನಾವಣಾ ಪೂರ್ವದಲ್ಲಿ ನೀಡಿದ ಮಾತನ್ನು ಕಾಂಗ್ರೆಸ್ ಪಾಲಿಸಿದೆ. ಈ ನಿಟ್ಟಿನಲ್ಲಿ ಜ. 21ರಂದು ಕಾಂಗ್ರೆಸ್ನ ಎಲ್ಲಾ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳನ್ನು ಸೇರಿಸುವ ದೊಡ್ಡ ಸಮಾವೇಶ ಮಂಗಳೂರಿನಲ್ಲಿ ನಡೆಯಲಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿದರು. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ನಾಯಕರು ಪಾಲ್ಗೊಳ್ಳಲಿದ್ದಾರೆ. ಸುಳ್ಯ ಬ್ಲಾಕ್ನಿಂದಲೂ ಕಾಂಗ್ರೆಸ್ ನಾಯಕರು, ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ . ಇದಕ್ಕೆ ಪೂರ್ವಭಾವಿಯಾಗಿ ಜ.15 ರಂದು ಸುಳ್ಯದಲ್ಲಿ ಸಭೆ ನಡೆಯಲಿದೆ ಎಂದರು.
ಬ್ಯಾನರ್ ಹಾನಿ ಪ್ರಕರಣಕ್ಕೆ ಖಂಡನೆ
ಸುಳ್ಯದಲ್ಲಿ ನಡೆದ ಬ್ಯಾನರ್ ಹಾನಿ ಪ್ರಕರಣ ಇದೊಂದು ಸೂಕ್ಷ್ಮವಿಷಯ. ಪೊಲೀಸ್ ಇಲಾಖೆ ಕೂಡಾ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಬೇಧಿಸಬೇಕು. ಎಲ್ಲಾ ಕಡೆ ಸಿಸಿ ಕ್ಯಾಮರಾ ಇರುವಂತಹ ಈ ಸಂದರ್ಭದಲ್ಲಿ ಇದನ್ನು ಶೀಘ್ರ ಬೇಧಿಸುವ ಕಾರ್ಯ ಮಾಡಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಪಿ.ಎಸ್.ಗಂಗಾಧರ್,ಕೆ. ಗೋಕುಲ್ ದಾಸ್, ಸತ್ಯಕುಮಾರ್ ಆಡಿಂಜ, ನಂದರಾಜ ಸಂಕೇಶ, ಚೇತನ್ ಕಜೆಗದ್ದೆ, ಭವಾನಿಶಂಕರ ಕಲ್ಮಡ್ಕ ಇದ್ದರು.









