ಸುಳ್ಯ:ಕಾಂಗ್ರೆಸ್ ಸರಕಾರ ಇದ್ದರೂ ಸರಕಾರಿ ಕಚೇರಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ, ಜನರ ಕೆಲಸ ಆಗುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ದೇವಸ್ಥಾನಗಳಲ್ಲಿ ನೇಮಕ ಆಗುತ್ತಿಲ್ಲ, ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಹೀಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಮುಂದೆ ಕಾರ್ಯಕರ್ತರ ಅಸಮಾಧಾನ ಸ್ಪೋಟಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ
ಕಾರ್ಯಕರ್ತರ ಸಭೆಯಲ್ಲಿ ಮಂಜುನಾಥ ಭಂಡಾರಿಯವರು ಮಾತನಾಡಿದ ಬಳಿಕ ಕಾರ್ಯಕರ್ತರು, ಮುಖಂಡರು ಮಾತನಾಡಿ ಅಸಮಾಧಾನ ತೋಡಿಕೊಂಡರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ ‘ ಕಾರ್ಯಕರ್ತರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಸರಕಾರ ಬಂದು ಒಂದೂವರೆ ವರ್ಷ ಆದರೂ ಸುಳ್ಯದಲ್ಲಿ ಟೇಕ್ ಆಫ್ ಆಗಿಲ್ಲ. ಸರಕಾರಿ ಕಚೇರಿಗಳಲ್ಲಿ ಕಾರ್ಯಕರ್ತರ, ಜನ ಸಾಮಾನ್ಯರ ಕೆಲಸ ಆಗುತ್ತಿಲ್ಲ, ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಇದಕ್ಕೆ ಪರಿಹಾರ ಆಗಬೇಕು ಎಂದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸುಳ್ಯದಲ್ಲಿ ಕಾರ್ಯಕರ್ತರ ಸಭೆ ನಡೆಯಬೇಕು, ಬಳಿಕ ಅಧಿಕಾರಿಗಳ ಸಭೆ ನಡೆಸಬೇಕು ಎಂದು ವೆಂಕಪ್ಪ ಗೌಡ
ಒತ್ತಾಯಿಸಿದರು.ಇದಕ್ಕೆ ಒಪ್ಪಿದ ಮಂಜುನಾಥ ಭಂಡಾರಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ದೇವಸ್ಥಾನಗಳ ಸಮಿತಿ ನೇಮಕ ಮಾಡದೆ ಕಾರ್ಯಕರ್ತಿಗೆ ಅವಕಾಶವನ್ನು ನಿಷೇಧಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಎರಡು ಬಾರಿ ಕಾಂಗ್ರೆಸ್ ಸದಸ್ಯರನ್ನೊಳಗೊಂಡ ಸಮಿತಿ ಮಾಡಲು ಅವಕಾಶ ಇದ್ದರೂ ವಿಳಂಬ ನೀತಿಯಿಂದ ಆ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ಸುಬ್ರಹ್ಮಣ್ಯದಂತಹಾ ಪ್ರಮುಖ ದೇವಸ್ಥಾನಗಳಲ್ಲಿಯೂ ನೇಮಕ ಮಾಡದೆ ಅಧಿಕಾರಿಗಳದ್ದೇ ಆಡಳಿತ ನಡೆಯುತಿದೆ. ಅಧಿಕಾರಿಗಳು ಪಕ್ಷಪಾತ ಮಾಡುತ್ತಾರೆ. ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸದೆ ಕಡೆಗಣಿಸುತ್ತಿದ್ದಾರೆ ಎಂದು ಹೇಳಿದರು.
ಪಕ್ಷ ಸಂಘಟನೆ ಮಾಡಲು ನಗರ ಹಾಗೂ ಗ್ರಾಮಗಳಲ್ಲಿ ಪಕ್ಷದ ಸಮಿತಿಗಳೇ ಆಗಿಲ್ಲ. ಯಾವುದೇ ಸಮಿತಿಗಳು ಕ್ರಿಯಾಶೀಲವಾಗಿಲ್ಲ ಎಂದು ನ.ಪಂ.ಸದಸ್ಯ ಶರೀಫ್ ಕಂಠಿ ಹೇಳಿದರು.
ಅಕ್ರಮ ಸಕ್ರಮ ಸಮಿತಿ ಕಡತ ಸಮಿತಿಗೆ ಬಾರದೇ ಕಡತಗಳು ತಿರಸ್ಕಾರ ಮಾಡಲಾಗುತಿದೆ ಎಂದು ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು, ಸರಸ್ವತಿ ಕಾಮತ್, ಮಹಮ್ಮದ್ ಫವಾಝ್, ಸಚಿನ್ರಾಜ್ ಶೆಟ್ಟಿ ಮತ್ತಿತರರು ಹೇಳಿದರು. ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಜನರ ಕೆಲಸ ಮಾಡುತ್ತಿಲ್ಲ ಎಂಬ ವಿಷಯದ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. ನಾವೇ ಕರೆಸಿದ ಅಧಿಕಾರಿಗಳು ಅಲ್ವಾ ಅವರನ್ನು ಕೆಲಸ ಮಾಡಿಸುವ ಜವಾಬ್ದಾರಿಯೂ ನಾಯಕರಿಗೆ ಇದೆ ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು. ನಾಯಕರ ಕೆಲಸ ಮಾತ್ರ ಆಗುವುದಲ್ಲ ಜನ ಸಾಮಾನ್ಯರ ಕೆಲಸ ಆಗಬೇಕು ಎಂದು ಸರಸ್ವತಿ ಕಾಮತ್ ಹೇಳಿದರು.
ಸುಳ್ಯ ಎಸ್ಐ ಹಾಗೂ ಕೆಲವು ಅಧಿಕಾರಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಮತ್ತೊಂದು ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದರೂ ಪಂಚಾಯತ್ಗಳಲ್ಲಿ ಯಾವುದೇ ಅನುದಾನ ಬರುತ್ತಿಲ್ಲ ಎಂದು ತಿರುಮಲೇಶ್ವರಿ ಅಡ್ಕಾರ್ ಹೇಳಿದರು. ಹೀಗೆ ವಿವಿಧ ವಿಷಯಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಕೆಪಿಸಿಸಿ ಕಾರ್ಯಾಧ್ಯಕ್ಷರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕರ್ತರ ಹಾಗೂ ಅಧಿಕಾರಿಗಳ ಸಭೆ ನಡೆಸುವುದು ಸೇರಿದಂತೆ ಕಾರ್ಯಕರ್ತರ ಭಾವನೆಗೆ ಸ್ಪಂದಿಸುವ ಬಗ್ಗೆ ಭರವಸೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ನೀಡಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮುಖಂಡರಾದ ಧನಂಜಯ ಅಡ್ಪಂಗಾಯ, ಡಾ.ರಘು, ಸರಸ್ವತಿ ಕಾಮತ್, ಕೆ.ಎಂ.ಮುಸ್ತಫ, ಶುಭಾಶ್ಚಂದ್ರ ಕೊಳ್ನಾಡು,ಇಸ್ಮಾಯಿಲ್ ಪಡ್ಪಿನಂಗಡಿ, ಕೆ.ಪಿ.ಜಾನಿ ಕಲ್ಲುಗುಂಡಿ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಜಯಪ್ರಕಾಶ್ ನೆಕ್ರಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.