ಸುಳ್ಯ:ದ.ಕ. ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂಬ ಭಾವನೆ, ಆಲೋಚನೆ ತಲೆಯಲ್ಲಿದ್ದರೆ ಮೊದಲು ತೆಗೆದುಹಾಕಿ. ಕಾಂಗ್ರೆಸ್ ಸಾಧನೆಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ದ.ಕ.ದಲ್ಲಿ ಮತ್ತೆ ಜಯಭೇರಿ ಮೊಳಗಿಸಿ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಬೇಕು ಎಂದು ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು. ಕನ್ನಡ ಜಿಲ್ಲೆಯನ್ನು ಸರ್ವತೋಮುಖ ಅಭಿವೃದ್ಧಿಯೆಡೆಗೆ ಕೊಂಡೊಯ್ದಿರುವುದು ಕಾಂಗ್ರೆಸ್ ಲೋಕಸಭಾ ಸದಸ್ಯರ ಸಾಧನೆ. ಆದರೆ ಬಳಿಕ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿತು. ಮತ್ತೆ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ
ಆರಂಭಿಸುವುದು ಗುರಿ ಕಾಂಗ್ರೆಸ್ ಪಕ್ಷ ಜನಪರ ಮತ್ತು ಅಭಿವೃದ್ಧಿಯ ರಾಜಕೀಯ ಮಾಡಿಕೊಂಡು ಬಂದಿದೆ. ಹಾಗಾಗಿ ಧೈರ್ಯದಿಂದ ಜನರ ಬಳಿಗೆ ತೆರಳಿ ಎಂದ ಅವರು, ಪ್ರತಿ ಮನೆಗೂ ತೆರಳಿ ಮತ ಕೇಳಬೇಕು. ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಲು ಶ್ರಮಿಸಬೇಕು ಎಂದು ಕರೆ ನೀಡಿದರು. ಸುಳ್ಯದಲ್ಲಿ ದ.ಕ. ಲೋಕಸಭಾ ಚುನಾವಣೆಯ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಬೆಯ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿದ ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ, ಯುವಕ, ಉತ್ಸಾಹಿ ಪದ್ಮರಾಜ್ ಅವರನ್ನು ಪಾರ್ಲಿಮೆಂಟಿಗೆ ಕಳುಹಿಸಿಕೊಡಬೇಕು. ಈ ಮೂಲಕ ನೆಮ್ಮದಿಯ, ಶಾಂತಿಯ ಜೀವನಕ್ಕೆ ಮುನ್ನುಡಿ ಹಾಕಬೇಕು ಎಂದರು. ಕರ್ನಾಟಕದಲ್ಲಿ 20ಕ್ಕೂ ಅಧಿಕ ಕ್ಷೇತ್ರಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಮಾತನಾಡಿ, ಸಿದ್ದರಾಮಯ್ಯ ಅವರ ಹಿಂದಿನ ಮುಖ್ಯಮಂತ್ರಿ ಅವಧಿಯಲ್ಲಿ ಸುಳ್ಯದಲ್ಲಿ ಅನೇಕ ಸೇತುವೆಗಳು ನಿರ್ಮಾಣಗೊಂಡಿವೆ. ನಮ್ಮ ಪ್ರತಿನಿಧಿ ಇಲ್ಲದೇ ಹೋದರೂ ಸಾಕಷ್ಟು ಜನಪರ ಕೆಲಸ ನಡೆದಿವೆ. ಕಾಂಗ್ರೆಸ್ ಎಂದೂ ಕೂಡ ಜನಪರ ಕೆಲಸ ಮಾಡಿದೆ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಈ ಚುನಾವಣೆಯನ್ನು ಗೆಲ್ಲುವ ಉತ್ಸಾಹದಲ್ಲಿ ಕಾರ್ಯಕರ್ತರಿದ್ದಾರೆ. ಇದಕ್ಕೆ ಪೂರಕವಾಗಿ ಉತ್ತಮ ಅಭ್ಯರ್ಥಿಯನ್ನು ಪಕ್ಷ ನೀಡಿದೆ. ಇನ್ನು ಮತ ಕೇಳಲು ಜನರ ಬಳಿಗೆ ಹೋಗುವಾಗ ಅಧೈರ್ಯವೂ ಬೇಡ. ಕಾರಣ, ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆ. ಹಾಗಾಗಿ ಈ ಲೋಕಸಭಾ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಐಸಿಸಿ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಲೋಕಸಭಾ ಚುನಾವಣೆಗೆ ಉತ್ತಮ ಅಭ್ಯರ್ಥಿ ಪದ್ಮರಾಜ್ ಅವರನ್ನು ಕಣಕ್ಕಿಳಿಸಿದೆ. ಇವರನ್ನು ಗೆಲ್ಲಿಸಿಕೊಡಬೇಕಾದ ಜವಾಬ್ದಾರಿ ನಮ್ಮದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ, ಈ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆಲ್ಲಬೇಕು. ಈ ದೇಶ ಉಳಿಯಬೇಕಾದರೆ ಕಾಂಗ್ರೆಸನ್ನು ಗೆಲ್ಲಿಸಲೇಬೇಕಾಗಿದೆ ಎಂದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ,ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಡಾ.ಬಿ.ರಘು, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಇಸಾಕ್ ಸಾಹೇಬ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.
ಲಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಉಪಾಧ್ಯಕ್ಷ ಹಾಗೂ ಸುಳ್ಯ ಕ್ಷೇತ್ರದ ಉಸ್ತುವಾರಿ ಎನ್.ಜಯಪ್ರಕಾಶ್ ರೈ ವಂದಿಸಿದರು. ಅಶೋಕ್ ಚೂಂತಾರು ಮತ್ತು ಸಚಿನ್ರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.