ಸುಳ್ಯ:ವಿಧಾನ ಸಭಾ ಚುನಾವಣೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಮುಖಂಡ ಜಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗ ಸುಳ್ಯದ ವಿವಿಧ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದರು. ವಿವಿಧ ಇಲಾಖೆಗಳಲ್ಲಿ ಜನರ ಕೆಲಸ ಕಾರ್ಯಗಳಲ್ಲಿ ಉಂಟಾಗುತ್ತಿರುವ ವಿಳಂಬವನ್ನು ಸರಿಪಡಿಸಿ ಜನರಿಗೆ ಶೀಘ್ರ ಸರಕಾರಿ ಸೇವೆ ನೀಡಬೇಕು ಎಂದು ಒತ್ತಾಯಿಸಲಾಯಿತು. ವಿವಿಧ
ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲು ಆಗ್ರಹಿಸಲಾಯಿತು.
ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಪರಿಶೀಲಿಸಿದರು. ಆಸ್ಪತ್ರೆಯ ವೈದ್ಯರೊಂದಿಗೆ ಚರ್ಚೆ ನಡೆಸಿದರು. ತಾಲೂಕು ಕಚೇರಿಗೆ ಆಗಮಿಸಿದ ನಿಯೋಗ ತಹಶೀಲ್ದಾರ್ ಎಂ.ಮಂಜುಳ ಅವರ ಜೊತೆ ಚರ್ಚೆ ನಡೆಸಿದರು. 94ಸಿ, ಅಕ್ರಮ ಸಕ್ರಮ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ, ಅಕ್ರಮ ಸಕ್ರಮ ಸಮಿತಿ ಸಭೆ ಕರೆಯವಂತೆ ಆಗ್ರಹಿಸಲಾಯಿತು. ಕಂದಾಯ ಇಲಾಖೆಯ ಸೇವೆಗಳು ವಿಳಂಬ ಮಾಡದೆ ಜನರಿಗೆ ತ್ವರಿತಗತಿಯಲ್ಲಿ ದೊರೆಯುವಂತಾಗಬೇಕು ಎಂದು ಜಿ.ಕೃಷ್ಣಪ್ಪ ಹೇಳಿದರು.

110 ಕೆವಿ ಲೈನ್ ಎಳೆಯಲು ಸರ್ವೆ ಮಾಡಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಆಗ್ರಹಿಸಿದರು. ಬಳಿಕ ಮೆಸ್ಕಾಂ ಕಚೇರಿಗೆ ಭೇಟಿ ಮಾಡಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಕೆಪಿಟಿಸಿಎಲ್ ಹಿರಿಯ ಇಂಜಿನಿಯರ್ಗಳನ್ನು ಸಂಪರ್ಕಿಸಿ ಮುಂದಿನ ಮಳೆಗಾಲಕ್ಕೆ ಮುನ್ನ 110 ಕೆ.ವಿ.ಸಬ್ ಸ್ಟೇಷನ್ ಹಾಗೂ ಲೈನ್ ಕಾಮಗಾರಿ ಪೂರ್ತಿಯಾಗಬೇಕು ಎಂದು ಒತ್ತಾಯಿಸಿದರು.
ಬಳಿಕ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಿಯೋಗ ಕೆಂಪು ಕಲ್ಲು ಮತ್ತು ಮರಳು ಸಾಗಾಟ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿತು. ಬಳಿಕ ಕೆಎಸ್ಆರ್ಟಿಸಿ ಡಿಪ್ಪೊಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ತೊಡಿಕಾನ ಮತ್ತಿತರ ಗ್ರಾಮೀಣ ಭಾಗಗಳಿಗೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಒದಗಿಸುವ ಬೇಡಿಕೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಸುಳ್ಯ ತಾಲೂಕಿನ ಸರಕಾರಿ ಕಚೇರಿಗಳಲ್ಲಿ ಇರುವ ವಿವಿಧ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದು ಕೃಷ್ಣಪ್ಪ ಹೇಳಿದರು.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ಜಿಲ್ಲಾ ಕೆಡಿಪಿ ಸದಸ್ಯೆ ಸುಜಯ ಕೃಷ್ಣ, ಅನುಸೂಯ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಪಿ.ಎ.ಮಹಮ್ಮದ್, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನ.ಪಂ.ಸದಸ್ಯ ರಾಜು ಪಂಡಿತ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ,
ಹೆಚ್. ಆದಂ ಕಡಬ, ಶ್ರೀಹರಿ ಕುಕ್ಕುಡೇಲು, ರಾಧಾಕೃಷ್ಣ ಪರಿವಾರಕಾನ, ಎಸ್.ಕೆ.ಹನೀಫ್, ಜಮಾಲುದ್ದೀನ್ ಪಂಜ, ಜಂಶೀರ್ ಶಾಲೆಕ್ಕಾರ್, ಆಶಿಕ್ ಅರಂತೋಡು, ಚಂದ್ರಶೇಖರ ಕೋಲ್ಚಾರ್ ಮತ್ತಿತರರು ಉಪಸ್ಥಿತರಿದ್ದರು.












