ಸುಳ್ಯ:ಸುಳ್ಯ ತಾಲೂಕಿನಾಧ್ಯಂತ ನಿರಂತರ ಸುರಿಯುತ್ತಿರುವ ಭಾರಿ ಮಳೆ ಮತ್ತು ಗಾಳಿಯಿಂದಾಗಿ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ಜನರಿಗೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಮೆಸ್ಕಾಂ ಇಂಜಿನಿಯರ್ಗಳ ಜೊತೆ ಮಾತುಕತೆ ನಡೆಸಿ ತುರ್ತು ಕೆಲಸ ಕಾರ್ಯಗಳನ್ನು ನಡೆಸುವಂತೆ ಸಲಹೆ ನೀಡಿದರು. ಮಳೆಗಾಲದ ತುರ್ತು ಕಾರ್ಯಗಳಾದ
ಮರಗಳ ಗೆಲ್ಲುಗಳನ್ನು ಕತ್ತರಿಸುವುದು, ಲೈನ್ ಕ್ಲಿಯರೆನ್ಸ್ ಮೊದಲಾದುವುಗಳನ್ನು ಸಮಾರೋಪಾದಿಯಲ್ಲಿ ನಡೆಸಬೇಕು. ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರುಗಳು ತಮ್ಮ ಇಲಾಖೆಯೊಂದಿಗೆ ಸಹಕರಿಸಲಿದ್ದಾರೆ. ಅದೇ ರೀತಿ ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರು ತಮ್ಮ ತಮ್ಮ ಗ್ರಾಮ ಮಟ್ಟದಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳಲು ಪ್ರೆರೇಪಿಸಲು ಸೂಚನೆ ನೀಡಲಾಗುವುದು. ಮೆಸ್ಕಾಂ ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಬೇಡಿಕೆ ಪಟ್ಟಿಯನ್ನು ಕೂಡಲೇ ಸರಕಾರಕ್ಕೆ ಸಲ್ಲಿಸಬೇಕು.ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇನ್ನು 2 ದಿನಗಳಲ್ಲಿ ಸುಳ್ಯ ತಾಲೂಕಿನ ವಿದ್ಯುತ್ ಕಡಿತ ಸಮಸ್ಯೆ ಸಂಪೂರ್ಣ ಪರಿಹರಿಸಬೇಕು. ಹಾಗೂ ಮುಂದಿನ ಒಂದು ವಾರದಲ್ಲಿ ಎಲ್ಲಾ ಗ್ರಾಮ ಮಟ್ಟದಲ್ಲಿ ಲೈನ್ ಕ್ಲಿಯರೆನ್ಸ್ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರಾದ ನಂದರಾಜ್ ಸಂಕೇಶ್, ಜುಬೈರ್ ಅರಂತೋಡು, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ ಉಪಸ್ಥಿತರಿದ್ದರು.