ಮಂಗಳೂರು: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ನ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಅವರ ಆಪ್ತರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ವೃತ್ತಿಯಲ್ಲಿ ಮಂಗಳೂರಿನಲ್ಲಿ ನೋಟರಿ ವಕೀಲರಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ,ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು, ಕುದ್ರೋಳಿ ಗೋಕರ್ಣನಾಥ ದೇವಳದ ಬಗ್ಗೆ ಅಪಾರ ಶ್ರದ್ಧೆ ಭಕ್ತಿ ಹೊಂದಿ ಕಿರಿಯ ವಯಸ್ಸಿನಲ್ಲೇ ದೇವಳದ ಬಹು ದೊಡ್ಡ ಜವಾಬ್ದಾರಿ ವಹಿಸಿಕೊಂಡು ಕ್ಷೇತ್ರದ
ಏಳಿಗೆಗಾಗಿ ಹಗಲಿರುಳು ದುಡಿಯುತ್ತಿರುವವರು ಪದ್ಮರಾಜ್ ಆರ್.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ರಾಮಯ್ಯರವರು.ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ. ಪದವಿಯನ್ನು ಬೆಳ್ತಂಗಡಿಯ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು. 1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದ ಇವರು ನಾಲ್ಕು ವರ್ಷಗಳ ಬಳಿಕ ಮಂಗಳೂರಿನ ಬಳ್ಳಾಲ್ಬಾಗ್ನಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್ ಸದಸ್ಯರಾದರು.
ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿಯವರ ಎಲ್ಲ ಚುನಾವಣೆ ಸಂದರ್ಭದಲ್ಲೂ ಅವರಿಗಾಗಿ ದುಡಿದಿದ್ದಾರೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯ ಸಭೆಯಲ್ಲಿ ಆಡಳಿತ ಸಮಿತಿಗೆ ಹೊಸ ಸದಸ್ಯರ ಸೇರ್ಪಡೆ ಬಗೆಗಿನ ಚರ್ಚೆ ನಡೆಯುತ್ತಿದ್ದ ಸಂದರ್ಭ ಪ್ರಸ್ತುತ ಇರುವ ಸದಸ್ಯರಿಗಿಂತ ಅತೀ ಕಿರಿಯ ವಯಸ್ಸಿನ ಪದ್ಮರಾಜ್ ಆರ್. ಹೆಸರನ್ನು ಹಿರಿಯರು ಸೂಚಿಸಿದ ಮೇರೆಗೆ ಕಳೆದ 25 ವರ್ಷದಿಂದ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ.ಜನಾರ್ದನ ಪೂಜಾರಿಯವರ ಅಪ್ಪಟ ಅನುಯಾಯಿಯಾಗಿರುವ ಪದ್ಮರಾಜ್ ರಾಮಯ್ಯರವರು ಮಂಗಳೂರಿನ ನವರಾತ್ರಿ ಉತ್ಸವ ವಿಶ್ವ ಪ್ರಸಿದ್ಧಿ ಪಡೆಯಲು ಶ್ರಮ ಪಟ್ಟವರು.
ಕೊರೊನಾ ಮಹಾಮಾರಿಯಿಂದಾಗಿ 40 ದಿನಗಳ ಲಾಕ್ಡೌನ್ ಸಂದರ್ಭ ಬಿ.ಜನಾರ್ದನ ಪೂಜಾರಿಯವರ ಆದೇಶದಂತೆ ದಿನಂಪ್ರತಿ ದೇವಸ್ಥಾನ ವತಿಯಿಂದ ಸುಮಾರು 1000 ಬಡವರು, ನಿರಾಶ್ರಿತರಿಗೆ ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ನಡೆಯುತ್ತಿತ್ತು. ಈ ಸಂದರ್ಭ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದವರೊಂದಿಗೆ ವಿವಿಧ ಪ್ರದೇಶಗಳಿಗೆ ತೆರಳಿ ಅನ್ನದಾನ ವಿತರಣೆಯಲ್ಲಿ ಭಾಗಿಯಾಗುತ್ತಿದ್ದರು. ಪದ್ಮರಾಜ್ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ದೇವಸ್ಥಾನದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 300 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್ಡೌನ್ ಸಂದರ್ಭದಲ್ಲಿ ತನ್ನದೇ ಆದ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರು, ಜೆ.ಪಿ.ಪ್ರತಿಷ್ಠಾನ ದ ಕ ಜಿಲ್ಲಾ ಗೌರವಸಂಚಾಲಕ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಅನೇಕ ಸಂಘ ಸಂಸ್ಥೆಗಳಿಂದ ಇವರ ಸಮಾಜಮುಖಿ ಸೇವೆಗೆ ಗೌರವ ಸಂದಿದೆ. ನಮ್ಮ ಕುಡ್ಲ ವಾಹಿನಿಯು ಪ್ರತಿ ವರ್ಷ ನೀಡುವ ನಮ್ಮ ಕುಡ್ಲ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುವ ಮೂಲಕ ನೆರವು ನೀಡುತ್ತಾರೆ. ಪದ್ಮರಾಜ್ರವರು ನಾರಾಯಣ ಗುರುಗಳ ಬಗ್ಗೆ ಅಪಾರ ಕಾಳಜಿ ಹೊಂದಿದವರು. ಇದೀಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ಮೂಲಕ ಪದ್ಮರಾಜ್ ರಾಜಕೀಯವಾಗಿ ಮುನ್ನಲೆಗೆ ಬಂದಿದ್ದಾರೆ.









