ಬೆಂಗಳೂರು::ರಾಜ್ಯ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದ್ದಂತೆ ಐದು ಗ್ಯಾರಂಟಿ ಯೋಜನೆ ಜಾರಿಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಈ ವರ್ಷವೇ ಜಾರಿಗೊಳಿಸುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಣೆ ಮಾಡಿದರು.
ಸರಕಾರ ಉಚಿತ ಗ್ಯಾರೆಂಟಿ ಯೋಜನೆ ಜಾರಿಗೊಳಿಸುವ ನಿರ್ಧಾರ
ತೆಗೆದುಕೊಂಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ 5 ಉಚಿತ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ.
‘ಗೃಹ ಜ್ಯೋತಿ’:
ಜುಲೈನಿಂದ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗ್ಯಾರೆಂಟಿಯನ್ನು ಜಾರಿಗೆ ತರುತ್ತಿದ್ದೇವೆ. ಒಬ್ಬ ಕುಟುಂಬ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಬಳಿಸಿದ್ದಾರೆ. ಇದರ ಸರಾಸರಿ ತೆಗೆದು ಅದರ ಮೇಲೆ 10 ಪರ್ಸೆಂಟ್ ಹೆಚ್ಚಿಗೆ ಮಾಡಿ ಲೆಕ್ಕ ತೆಗೆದುಕೊಳ್ಳುತ್ತೇವೆ. ಒಬ್ಬ ಒಂದು ತಿಂಗಳು 190 ಯುನಿಟ್ ಖರ್ಚು ಮಾಡಿರಬಹುದು. ಇನ್ನೊಂದು ತಿಂಗಳು 180 ಯುನಿಟ್ ವಿದ್ಯುತ್ ಬಳಸಿರಬಹುದು. ಆದರೆ 12 ತಿಂಗಳಲ್ಲಿ ಆತನ ಸರಾಸರಿ ಯುನಿಟ್ ಬಳಕೆಯ ಮೇಲೆ ಸರ್ಕಾರ 10 ಪರ್ಸೆಂಟ್ ಹೆಚ್ಚು ಸೇರಿಸಲಾಗುತ್ತದೆ. ಈ ವೇಳೆ ಸರಾಸರಿ 200 ಯುನಿಟ್ ಒಳಗಿದ್ದರೆ ವಿದ್ಯುತ್ ಉಚಿತವಾಗಲಿದೆ.
ಗೃಹ ಲಕ್ಷ್ಮಿ ಯೋಜನೆ:
ಆಗಸ್ಟ್ 15 ರಿಂದ ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಲಿದೆ. ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕಾಗಿ ಮನೆಯ ಯಜಮಾನಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆ ನೀಡಬೇಕು. ಇದಕ್ಕಾಗಿ ಮನೆಯ ಯಜಮಾನಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು . ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಹಣ ಜಮಾವಣೆಯಾಗಲಿದೆ. ಒಂದು ಕುಟುಂಬದ ಯಜಮಾನಿಗೆ 2,000 ರೂಪಾಯಿ ಹಣ ಜಮಾವಣೆ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಯೋಜನೆಗೆ ಅರ್ಜಿ ಆಹ್ವಾನಿಸಿ, ಮನೆಯ ಯಜಮಾನಿಯ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾವುದೇ ಕಂಡೀಷನ್ ಇಲ್ಲದೆ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಾಮಾಜಿಕ ಭದ್ರತಾ ಪಿಂಚಣಿ, ಹಿರಿಯರ ಪಿಂಚಣಿ ಜೊತೆಗೂ ಈ ಸರ್ಕಾರದ 2,000 ರೂಪಾಯಿ ಗೃಹ ಲಕ್ಷ್ಮಿ ಯೋಜನೆ ಲಾಭ ಸಿಗಲಿದೆ.
ಅನ್ನ ಭಾಗ್ಯ ಯೋಜನೆ:
ನಮ್ಮ ಗ್ಯಾರೆಂಟಿ ಪ್ರಕಾರ 10 ಕೆಜಿ ಆಹಾರ ಧಾನ್ಯ ನೀಡುವುದಾಗಿ ಹೇಳಿದ್ದೇವೆ. ಜುಲೈ 1 ರಿಂದ ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಆಹಾರ ಧಾನ್ಯ ವಿತರಣೆಯಾಗಲಿದೆ.
‘ಶಕ್ತಿ ಯೋಜನೆ’:
ರಾಜ್ಯದ ಎಲ್ಲಾ ಮಹಿಳೆಯರಿಗೆ, ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಈ ತಿಂಗಳ 11 ರಿಂದ ಉಚಿತ ಬಸ್ ಪ್ರಯಾಣದ ಲಾಭ ಪಡೆಯಬಹುದು. ಈ ಯೋಜನೆ ಕರ್ನಾಟಕದ ರಾಜ್ಯದೊಳಗೆ ಅನ್ವಯವಾಗುತ್ತದೆ. ಎಸಿ, ಸ್ಲೀಪರ್ ಹಾಗೂ ಐಷಾರಾಮಿ ಬಸ್ ಹೊರತುಪಡಿಸಿ ಉಳಿದ ಎಲ್ಲಾ ಬಸ್ಗಳಲ್ಲಿ ಮಹಿಳೆಯರು ಪ್ರಯಾಣ ಉಚಿತವಾಗಿದೆ. ರಾಜ್ಯದಿಂದ ಹೊರ ರಾಜ್ಯಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನ್ವಯವಾಗುವುದಿಲ್ಲ. ಮಹಿಳೆಯರು, ವಿದ್ಯಾರ್ಥನಿಯರು ಜೂನ್ 11 ರಿಂದ ಯಾವುದೇ ಹಣ ಪಾವತಿಸದೇ ಪ್ರಯಾಣ ಮಾಡಬಹುದು. ಬಿಎಂಟಿಸಿ ಬಸ್ನಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸಿದ್ದರಾಯ್ಯ ಘೋಷಿಸಿದ್ದಾರೆ. ಕೆಎಸ್ಆರ್ಟಿಸಿ ಬಸ್ನಲ್ಲಿ ಶೇಕಡಾ 50 ರಷ್ಟು ರಿಸರ್ವ್ ಮಾಡಲಾಗುತ್ತದೆ.
‘ಯುವನಿಧಿ ಯೋಜನೆ”
ಪ್ರಸಕ್ತ ವರ್ಷ ತೇರ್ಗಡೆಯಾದ ಎಲ್ಲಾ ಪದವಿದರರು, ವೃತ್ತಿಪರ ಕೋರ್ಸ್ ಮಾಡಿದವರಿಗೂ ಯುವನಿಧಿ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಬಹುದು. 24 ತಿಂಗಳವರೆಗೆ ಪ್ರತಿ ತಿಂಗಳಿಗೆ 3,000 ರೂಪಾಯಿ ಪದವೀಧರರಿಗೆ, ಡಿಪ್ಲೋಮಾ ಕೋರ್ಸ್ ಮಾಡಿದವರಿಗೆ 1500 ರೂಪಾಯಿ ನೀಡಲಾಗುತ್ತದೆ. ಇದರೊಳಗೆ ಕೆಲಸಕ್ಕೆ ಸೇರಿದವರಿಗೆ ಈ ಯೋಜನೆ ಮುಂದುವರಿಯುವುದಿಲ್ಲ. ಇದು ನಿರುದ್ಯೋಗಿ ಯುವಕರಿಗೆ ನೀಡುವ ಯೋಜನೆಯಾಗಲಿದೆ. ಈ ವರ್ಷ ಪಾಸ್ ಆದ ನಿರುದ್ಯೋಗ ಯುವ ಸಮೂಹಕ್ಕೆ ಹಣ ಜಮಾ ಮಾಡಲಾಗುತ್ತದೆ. ಗಂಡು, ಹೆಣ್ಣು ಹಾಗೂ ಮಂಗಳಮುಖಿಯರಿಗೂ ಈ ಯೋಜನೆ ಸಿಗಲಿದೆ.
ಕಾಲೇಜು, ವೃತ್ತಿಪರ ಕೋರ್ಸ್ ಮುಗಿಸಿ ಕೆಲಸ ಸಿಗದ ಯುವ ಸಮೂಹಕ್ಕೆ ಈ ಯೋಜನೆ ಲಾಭ ಸಿಗಲಿದೆ. ಓರ್ವ ನಿರುದ್ಯೋಗಿಗೆ 2 ವರ್ಷ ಸರ್ಕಾರ ಹಣ ಜಮಾ ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.