ನವದೆಹಲಿ:ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಸರಿಯಾಗಿ ಲಭ್ಯವಾಗದೆ ಹೋಟೆಲ್ ಉದ್ಯಮವು ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ, ‘ವಾಣಿಜ್ಯ ಬಳಕೆ ಎಲ್ಪಿಜಿಯ ತಿಂಗಳ ಸರಾಸರಿ ಅಗತ್ಯದ ಶೇಕಡ 20ರಷ್ಟನ್ನು ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಪೂರೈಕೆ ಮಾಡಲಿವೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಭರವಸೆ ನೀಡಿದರು.ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳ
ಅಕ್ರಮ ದಾಸ್ತಾನು ಆಗಬಾರದು, ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯಾರಿಗೂ ಅವಕಾಶ ಸಿಗಬಾರದು ಎಂಬ ಕಾರಣಕ್ಕೆ ಕಂಪನಿಗಳು ಈ ಕಾರ್ಯವನ್ನು ರಾಜ್ಯ ಸರ್ಕಾರಗಳ ಜೊತೆ ಸಮನ್ವಯದಲ್ಲಿ ಮಾಡಲಿವೆ ಎಂದು ಪುರಿ ಅವರು ಲೋಕಸಭೆಗೆ ತಿಳಿಸಿದರು.
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಣಾಮವಾಗಿ ಇಂಧನ ಮಾರುಕಟ್ಟೆಯಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ಅವರು ಲೋಕಸಭೆಗೆ ವಿವರ ಒದಗಿಸಿದರು. ವಾಣಿಜ್ಯ ಬಳಕೆ ಎಲ್ಪಿಜಿ ಲಭ್ಯವಾಗದೆ ದೇಶದಾದ್ಯಂತ ಹಲವು ಹೋಟೆಲ್ಗಳು ತಮ್ಮ ಕಾರ್ಯಾಚರಣೆ ತಗ್ಗಿಸಿವೆ, ಕೆಲವು ಹೋಟೆಲ್ಗಳು ವಹಿವಾಟು ನಿಲ್ಲಿಸಿವೆ. ಎಲ್ಪಿಜಿ ಕೊರತೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಸದನದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಅದಕ್ಕೆ ಉತ್ತರವಾಗಿ ಸಚಿವರು ಈ ಭರವಸೆ ಇತ್ತರು.
ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳು ಕಾಳಸಂತೆಯಲ್ಲಿ ಮಾರಾಟ ಆಗುವುದನ್ನು ತಡೆಯುವ ಉದ್ದೇಶದಿಂದ ಕೆಲವು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗಿದೆಯೇ ವಿನಾ, ಆತಿಥ್ಯ ಉದ್ಯಮಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಹೀಗೆ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ಗಳನ್ನು ಸರ್ಕಾರದ ಯಾವುದೇ ನಿಯಂತ್ರಣ ಇಲ್ಲದೆ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಸರ್ಕಾರದ ನಿಯಂತ್ರಣ ಇರುವುದಿಲ್ಲ. ಆದರೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿರುವ, ಪೂರೈಕೆ ಕಡಿಮೆ ಇರುವ ಸಂದರ್ಭಗಳಲ್ಲಿ ಈ ಬಗೆಯ ವ್ಯವಸ್ಥೆಯು ಸಿಲಿಂಡರ್ಗಳ ಅಕ್ರಮ ದಾಸ್ತಾನಿಗೆ ಹಾಗೂ ಭಾರಿ ದರದಲ್ಲಿ ಅವುಗಳ ಮರುಮಾರಾಟಕ್ಕೆ ದಾರಿ ಮಾಡಿಕೊಡುತ್ತದೆ. ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ಸಂಪೂರ್ಣವಾಗಿ ನಿಯಂತ್ರಣಮುಕ್ತವಾಗಿ ಇರಿಸಿದ್ದರೆ, ಖರೀದಿಸಿದ ಸಿಲಿಂಡರ್ಗಳು ಕಾಳಸಂತೆಗೆ ರವಾನೆ ಆಗುತ್ತಿದ್ದವು, ಅರ್ಹ ಗ್ರಾಹಕರಿಗೆ ಅವು ಸಿಗದಂತೆ ಆಗುತ್ತಿತ್ತು ಎಂದು ವಿವರಣೆ ನೀಡಿದರು.
ದೇಶದಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಅಥವಾ ವಿಮಾನ ಇಂಧನ ಕೊರತೆ ಇಲ್ಲ ಎಂದು ಸಚಿವರು ಹೇಳಿದರು. ಈ ಮೊದಲು ಭಾರತವು ತನ್ನ ಅಗತ್ಯದ ಶೇ 60ರಷ್ಟು ಎಲ್ಪಿಜಿಯನ್ನು ಕತಾರ್, ಯುಎಇ, ಸೌದಿ ಅರೇಬಿಯಾ ಮತ್ತು ಕುವೈತ್ನಿಂದ ಆಮದು ಮಾಡಿಕೊಳ್ಳುತ್ತಿತ್ತು. ಇನ್ನುಳಿದ ಶೇ 40ರಷ್ಟು ದೇಶದಲ್ಲಿ ಉತ್ಪಾದನೆ ಆಗುತ್ತಿದೆ.ಈಗ ಹೆಚ್ಚುವರಿ ಮೂಲಗಳನ್ನು ಕಂಡುಕೊಳ್ಳಲಾಗಿದೆ. ಅಮೆರಿಕ, ನಾರ್ವೆ, ಕೆನಡಾ, ಅಲ್ಜೀರಿಯಾ, ರಷ್ಯಾದಿಂದ ಕೂಡ ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಲೋಕಸಭೆಗೆ ವಿವರಿಸಿದರು.









