ಸುಳ್ಯ:ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಸಮರ್ಪಕ ಪೂರೈಕೆ ಇಲ್ಲದ ಕಾರಣ ದೇಶದಾದ್ಯಂತ ಹೋಟೆಲ್ ಉದ್ಯಮ ಸೇರಿದಂತೆ ವಾಣೀಜ್ಯ ಸಿಲಿಂಡರ್ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಳ್ಯ ನಗರದಲ್ಲಿಯೂ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಸಿಲಿಂಡರ್ ಕೊರತೆಯಿಂದಾಗಿ ಹೋಟೆಲ್ಗಳಲ್ಲಿ ಆಹಾರ ತಯಾರಿಕೆಗೆ
ತೊಂದರೆ ಉಂಟಾಗಿದ್ದು, ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕ್ಯಾಂಟೀನ್ಗಳು, ಕ್ಯಾಟರಿಂಗ್ ಸೇರಿದಂತೆ ಸುಳ್ಯ ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಹೋಟೆಲ್ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಬಹುತೇಕ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಮೇಲೆ ಅವಲಂಬಿತವಾಗಿವೆ. ಆದರೆ ಕಳೆದ ಎರಡು ದಿನಗಳಿಂದ ವಾಣೀಜ್ಯ ಗ್ಯಾಸ್ ಸಿಲಿಂಡರ್ಗಳ ಪೂರೈಕೆ ಕಡಿಮೆಯಾಗಿರುವುದರಿಂದ ಹೋಟೆಲ್ಗಳ ದೈನಂದಿನ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿದೆ ಎಂದು ಮಾಲಕರು ತಿಳಿಸಿದರು.
ಇದರ ನಡುವೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಿರುವುದರಿಂದ ಹೋಟೆಲ್ ಮಾಲೀಕರಿಗೆ ಹೊರೆ ಹೆಚ್ಚಾಗಿದೆ. ಕೆಲವರು ಹೆಚ್ಚುವರಿ ದರ ನೀಡಿ ಖಾಸಗಿ ಮೂಲಕ ಸಿಲಿಂಡರ್ ಖರೀದಿಸಬೇಕಾದ ಸ್ಥಿತಿ ಎದುರಾಗಿದೆ ಎಂದು ಹೇಳುತ್ತಾರೆ.
ಪ್ರವಾಸಿಗರು ಮತ್ತು ಪ್ರಯಾಣಿಕರು ಸೇರಿದಂತೆ ದಿನಾಲು ಸಾವಿರಾರು ಮಂದಿ ಭೇಟಿ ನೀಡುವ ಕಾರಣ ಆಹಾರ ತಯಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಬಳಕೆಯಾಗುತ್ತದೆ. ದಿನಾಲು ಸರಬರಾಜು ಇದ್ದ ಕಾರಣ ಸಂಗ್ರಹಿಸುವ ಗೋಜಿಗೂ ಹೋಗುವುದಿಲ್ಲ. ಇದೀಗ ಒಮ್ಮಿಂದೊಮ್ಮಲೆ ಗ್ಯಾಸ್ ಸರಬರಾಜು ನಿಂತ ಕಾರಣ ತೀವ್ರ ಸಮಸ್ಯೆ ಉಂಟಾಗಿದೆ ಎನ್ನುತ್ತಾರೆ ಅರಂಬೂರಿನ ಶ್ರೀಕೃಷ್ಣ ರಸಪಾಕಂ ಗ್ರಾಂಡ್ ಹೋಟೆಲ್ ಮಾಲಕರಾದ ನಾರಾಯಣ ಕೇಕಡ್ಕ.
ಗ್ಯಾಸ್ ಸಿಲಿಂಡರ್ ಸರಬರಾಜು ಸ್ಥಗಿತ ಆದ ಕಾರಣ ಹೋಟೆಲ್ ಉದ್ಯಮ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.ಗ್ಯಾಸ್ ಪೂರೈಕೆ ಸಮಸ್ಯೆ ಮುಂದುವರಿದರೆ ಹೋಟೆಲ್ ಉದ್ಯಮವೇ ಬಂದ್ ಆಗುವ ಸಾಧ್ಯತೆ ಇದೆ ಎಂದು ಸಂತೃಪ್ತಿ ಹೋಟೆಲ್ ಮಾಲಕರಾದ ನವೀನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸುಳ್ಯದಲ್ಲಿ ದೊಡ್ಡ ಹೋಟೆಲ್ಗಳು ಮಾತ್ರವಲ್ಲದೆ ಸಣ್ಣ ಕ್ಯಾಂಟೀನ್ಗಳು, ಹೋಟೆಲ್ಗಳು ಕೂಡ ಗ್ಯಾಸ್ ಸರಬರಾಜು ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ. ಸಮಸ್ಯೆ ಮುಂದುವರಿದರೆ ಹೋಟೆಲ್ ಬಂದ್ ಮಾಡುವ ಸ್ಥಿತಿ ಎದುರಾಗಬಹುದು ಎನ್ನುತ್ತಾರೆ ಹಲವು ಮಂದಿ ಹೋಟೆಲ್ ಉದ್ಯಮಿಗಳು.ಹೋಟೆಲ್ ಮಾತ್ರವಲ್ಲದೆ, ಹಾಸ್ಟೆಲ್ಗಳು, ಪಿಜಿಗಳು, ಸೇರಿದಂತೆ ವಾಣೀಜ್ಯ ಸಿಲಿಂಡರ್ ಬಳಸುವ ಎಲ್ಲಡೆಯೂ ಆತಂಕ ಮನೆ ಮಾಡಿದೆ. ಕೆಲವು ಹೋಟೆಲ್ಗಳು, ಕ್ಯಾಂಟೀನ್ಗಳು ಗ್ಯಾಸ್ ದೊರೆಯದ ಕಾರಣ ಈಗಾಗಲೇ ಬಂದ್ ಮಾಡಲಾಗಿದೆ. ಗ್ಯಾಸ್ ಏಜೆನ್ಸಿಗಳು ನಿನ್ನೆಯಿಂದ ಗ್ಯಾಸ್ ಸರಬರಾಜು ಸ್ಥಗಿತಗೊಳಿಸಿದೆ. ಯಾವಾಗ ಪುನರಾರಂಭ ಆಗುತ್ತದೆ ಎಂಬ ಸ್ಪಷ್ಟತೆ ಇನ್ನೂ ದೊರೆತಿಲ್ಲ. ಪಶ್ಚಿಮ ಏಷ್ಯಾ ಸಂಘರ್ಷದಿಂದ ದೇಶ ಗ್ಯಾಸ್ ಸರಬರಾಜು ಮೇಲೆ ತೀವ್ರ ಹೊಡೆತ ನೀಡಿದೆ.









