*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕೃಷಿಕರಿಗೆ ಆದಾಯ ಕೊಡುವ ಮುಖ್ಯ ಮಿಶ್ರ ಬೆಳೆ ಕೊಕ್ಕೊ. ಅಡಿಕೆ ತೋಟಗಳಲ್ಲಿ ಕೊಕ್ಕೊ ಮರಗಳು ಅಡಿಕೆ ಮರಗಳ ಜೊತೆ ಗಳಸ್ಯ ಕಂಠಸ್ಯವಾಗಿ ಬೆಳೆಯುತ್ತದೆ. ತಲ ತಲಾಂತರಗಳಿಂದ ಅಡಿಕೆ ಜೊತೆಗಿನ ಮಿಶ್ರ ಬೆಳೆ ಕೊಕ್ಕೊ. ಆದರೆ ಅಡಿಕೆಯ ದರ ಏರುತ್ತಾ ಹೋದಾಗ ಕೊಕ್ಕೊ ದರ ಕುಂಟುತ್ತಲೇ ಸಾಗಿತ್ತು. ಉತ್ತಮ ಬೆಲೆ ದೊರೆಯದ ಕಾರಣ ಕೃಷಿಕರು ಆಸಕ್ತಿ ಕಳೆದುಕೊಂಡಿದ್ದ ಕೊಕ್ಕೊ ಬೆಳೆ ಇದೀಗ ಬಂಪರ್ ಬೆಲೆ ಬರುವ ಮೂಲಕ ಮಿಂಚುತಿದೆ. ಕೊಕ್ಕೊ ಬೆಲೆ ಶತಕವನ್ನೂ ದಾಟಿ ಮುನ್ನುಗ್ಗುತ್ತಿದ್ದು ಕೆಜಿ ಕೊಕ್ಕೊ ದರ ರೂ.150 ದಾಖಲಾಗಿದೆ. ಮಾ.6ರಂದು ಸುಳ್ಯದಲ್ಲಿ
ಕೊಕ್ಕೋ ಕೆಜಿಗೆ 150 ರೂಗೆ ಖರೀದಿಸಲಾಗುತ್ತಿದೆ. ಉತ್ತಮ ದರ ಇದ್ದರೂ ಕೊಕ್ಕೊ ಬೆಳೆ, ಫಸಲು ಕಡಿಮೆ ಆಗಿರುವ ಕಾರಣ ಉತ್ತಮ ಬೆಲೆ ಇದ್ದರೂ ಅದರ ಪ್ರಯೋಜನ ಕೃಷಿಕರಿಗೆ ಸಿಗುತ್ತಾ ಇಲ್ಲಾ. ಕೊಕ್ಕೊ ದರ ಏರುತ್ತಾ ಸಾಗಿ ಕಳೆದ 20 ದಿನಗಳ ಹಿಂದೆ 100 ರೂ ದಾಖಲಿಸಿತ್ತು. ಬಳಿಕದ ದಿನಗಳಲ್ಲಿಯೂ ದರ ಏರಿ ಇದೀಗ 150ಕ್ಕೆ ಮುಟ್ಟಿದೆ.
ವರ್ಷದಲ್ಲಿ 8-9 ತಿಂಗಳ ಕಾಲ ಕೊಕ್ಕೊ ಫಸಲು ನೀಡುತ್ತದೆ. ಎಪ್ರಿಲ್ನಿಂದ ಆಗಸ್ಟ್ ವರೆಗೆ ಕೊಕ್ಕೊ ಕೃಷಿ ಫಸಲು ನೀಡುವ ಉತ್ತಮ ಸೀಸನ್.

ಡಿಸೆಂಬರ್ನಿಂದ ಮಾರ್ಚ್ ತನಕವೂ ಕೊಕ್ಕೊ ಸಾಮಾನ್ಯ ಫಸಲು ಬರುತ್ತದೆ. ಹಲವು ವರ್ಷಗಳಿಂದ ಕೊಕ್ಕೊ ದರ ಕೆಜಿಗೆ 50-60ರೂ ಆಸುಪಾಸಿನಲ್ಲಿಯೇ ಗಿರಕಿ ಹೊಡೆಯುತ್ತಿತ್ತು. ಅಡಿಕೆ ದರ 500ಕ್ಕೆ ಏರಿದಾಗಲೂ ಕೊಕ್ಕೊ 50ರ ಸುತ್ತ ಗಿರಕಿ ಹೊಡೆಯುತ್ತಿತ್ತು. ಇದರಿಂದ ಕೊಕ್ಕೊ ಕೃಷಿ ಲಾಭದಾಯಕವಾಗಿಲ್ಲ ಎಂದು ಕೃಷಿಕರು ನಿಧಾನಕ್ಕೆ ಕೊಕ್ಕೊ ಕೃಷಿಯಿಂದ ವಿಮುಖರಾಗ ತೊಡಗಿದರು. ಇದರಿಂದ ಕೊಕ್ಕೊ ಇಳುವರಿಯೂ ಕಡಿಮೆಯಾಯಿತು. ಆದರೆ ಇದೀಗ ಉತ್ತಮ ದರ ಬಂದರೂ ಹಲವು ಕೃಷಿಕರಲ್ಲಿ ಕೊಕ್ಕೊ ಬೆಳೆ ಇಲ್ಲದ ಸ್ಥಿತಿ ಇದೆ.
ದರ ಕಡಿಮೆ, ಮಂಗ, ಅಳಿಲು ಉಪಟಳ:
ಕೊಕ್ಕೊ ಉತ್ತಮ ಮಿಶ್ರ ಬೆಳೆಯಾದರೂ ಹಲವು ಸಮಸ್ಯೆಗಳಿಂದ ಕೊಕ್ಕೊ ಬೆಳೆ ಸೊರಗಿದೆ. ಮಂಗ, ಅಳಿಲು, ಕಬ್ಬೆಕ್ಕು ಮತ್ತಿತರ ಪ್ರಾಣಿಗಳ ಉಪಟಳದಿಂದ ಕೊಕ್ಕೊ ಫಸಲು ಕಡಿಮೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ ಎಂಬ ಸ್ಥಿತಿ ಕೃಷಿಕರದ್ದು. ಅಲ್ಲದೆ ಉತ್ತಮ ದರವೂ ಇಲ್ಲದೆ ನಷ್ಟ ಅನುಭವಿಸಿತ್ತು. ಹಲವು ಬಾರಿ ಕೊಕ್ಕೊ ಕೃಷಿಯಿಂದ ಸಂಬಳಕ್ಕೂ ಆದಾಯ ಸಿಗದ ಸ್ಥಿತಿ ಇತ್ತು. ಮಳೆಗಾಲದಲ್ಲಿ ಫಸಲು ಕೊಡುವ ಸೀಸನ್ ಆದರೂ ಮಳೆ ಬಂದ ಕೂಡಲೇ
ಕೊಕ್ಕೊಗೆ ಕೊಳೆ ರೋಗ ಬಾದಿಸುತ್ತದೆ.ಕೊಕ್ಕೊ ಕಾಯಿ ಕಪ್ಪು ಬಣ್ಣಕ್ಕೆ ತಿರುಗಿ ನಶಿಸಿ ಹೋಗುತ್ತದೆ. ಬೋಡೋ ಮಿಶ್ರಣ ಸಿಂಪಡಿಸಿದರೆ ಕೊಳೆ ರೋಗವನ್ನು ನಿಯಂತ್ರಿಸಬಹುದು. ಆದರೆ ಕೊಕ್ಕೊ ಅಸ್ಟಾಗಿ

ಲಾಭದಾಯಕವಲ್ಲದ ಕಾರಣ ಬೋಡೋ ಸಿಂಪಡಿಸುವ ಗೋಜಿಗೆ ರೈತರು ಹೋಗುವುದಿಲ್ಲ.ಅಡಿಕೆ ತೋಟದಲ್ಲಿ ಕೊಕ್ಕೊ ಮರ ವಿಶಾಲವಾಗಿ ಬೆಳೆದು ಅಡಿಕೆ ತೋಟಕ್ಕೆ ಹಾಕಿದ ಗೊಬ್ಬರ, ನೀರನ್ನು ಪಡೆದು ಫಸಂದಾಗಿ ಬೆಳೆಯುತ್ತದೆ. ಇದರಿಂದ ಅಡಿಕೆ ಇಳುವರಿ ಕಡಿಮೆಯಾಗುತ್ತದೆ. ಸ್ಪ್ರಿಂಕ್ಲರ್ ನೀರು ಹಾಯಿಸುವುದಕ್ಕೂ ತಡೆ ಉಂಟಾಗುತ್ತದೆ. ಈ ಕಾರಣಗಳಿಂದ ಹಲವು ಮಂದಿ ಕೃಷಿಕರು ಕೊಕ್ಕೊ ಕೃಷಿಯನ್ನು ಕಡಿಮೆ ಮಾಡಿದ್ದಾರೆ. ಹಲವರು ಕೊಕ್ಕೊ ಮರಗಳನ್ನು ಕಡಿದ್ದಾರೆ. ಹೊಸತಾಗಿ ಅಸ್ಟಾಗಿ ಕೊಕ್ಕೊ ಕೃಷಿಯೂ ಮಾಡುತ್ತಿಲ್ಲ. ಹೀಗೆ ಹತ್ತು ಹಲವು ಕಾರಣಗಳಿಂದ ಕೊಕ್ಕೊ ಕೃಷಿ ಕಡಿಮೆಯಾಗಿದೆ. ಈಗ ಬೇಡಿಕೆಗೆ ತಕ್ಕಂತೆ ಕೊಕ್ಕೊ ಮಾರುಕಟ್ಟೆಗೆ ಬರುವುದಿಲ್ಲ. ಇದರಿಂದ ಕೊಕ್ಕೊ ದರ ದಿನದಿಂದ ದಿನಕ್ಕೆ ಏರುತಿದೆ ಎನ್ನಲಾಗುತಿದೆ.
‘ಈಗ ಉತ್ತಮ ದರ ಬಂದಿದೆ. ಆದರೆ ಕೊಕ್ಕೊ ಉತ್ಪಾದನೆ ಕಡಿಮೆಯಾಗಿದೆ. ಸಾಕಷ್ಟು ಕೊಕ್ಕೊ ಮಾರುಕಟ್ಟೆಗೆ ಬರುತ್ತಿಲ್ಲ. ಕೃಷಿಕರು ಕೊಕ್ಕೊ ಕೃಷಿ ಕಡಿಮೆ ಮಾಡಿದ್ದಾರೆ. ನಮ್ಮ ತೋಟದಲ್ಲಿಯೇ ಕೊಕ್ಕೊ ಕೃಷಿ ಅರ್ಧದಷ್ಟು ಕಡಿಮೆ ಮಾಡಿದ್ದೇವೆ ಎನ್ನುತ್ತಾರೆ ಕೃಷಿಕರಾದ ಜಯಪ್ರಕಾಶ್ ಪೇರಾಲು.

ಬೆಲೆ ಸ್ಥಿರವಾಗಬಹುದೇ..?
ಕೊಕ್ಕೊ ಕೆಜಿಗೆ ನೂರು ರೂಗಿಂತ ಮೇಲೆ ದರ ಬಂದರೆ ಅದು ಲಾಭದಾಯಕ. ಇದರಿಂದ ಕೃಷಿಕರಿಗೆ ಉತ್ತಮ ಆದಾಯ ಬರಬಹುದು. ಆದರೆ ಮುಂದಿನ ತಿಂಗಳಿನಿಂದ ಸೀಸನ್ ಆರಂಭವಾಗಿ ಕೊಕ್ಕೊ ಹೆಚ್ಚಾಗಿ ಮಾರುಕಟ್ಟೆಗೆ ಬರುವಾಗ ದರ ಕುಸಿತವಾಗುವ ಅಪಾಯ ಇದೆ. ಈ ದರ ಸ್ಥಿರವಾಗಿ ಇದ್ದರೆ ಉತ್ತಮ ಎಂದು ಕೃಷಿಕರು ಹೇಳುತ್ತಾರೆ. ಇದೀಗ ತಿಂಗಳಿನಿಂದ ಮೇಲೆ ಕೊಕ್ಕೊ ದರ ಏರು ಗತಿಯಲ್ಲಿದೆ. ಈ ದರ ಸ್ಥಿರವಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸೀಸನ್ ಆರಂಭವಾದಾಗ ಬೆಲೆ ಕಡಿಮೆ ಆಗುವ ಸಾಧ್ಯತೆ ಎನ್ನುತ್ತಾರೆ ವ್ಯಾಪಾರಿಗಳು. ಈಗಿನ ಸ್ಥಿತಿ ಮುಂದುವರಿದರೆ ಕೊಕ್ಕೊ ದರ ಕೆಲವೇ ದಿನಗಳಲ್ಲಿ ದ್ವಿಶತಕ ದಾಖಲಿಸುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ.!















