ಮಂಗಳೂರು:ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಹೂಡಿಕೆದಾರರು, ಡೆವೆಲಪರ್ ಗಳು ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸರ್ಕಾರ ಪ್ರತ್ಯೇಕ ನೀತಿಯನ್ನು ರೂಪಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಕೇರಳ, ಗೋವಾದ ರೀತಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ
ನಮ್ಮ ರಾಜ್ಯ ಹಿಂದೆ ಉಳಿದಿದೆ. ನಮ್ಮ ರಾಜ್ಯದಲ್ಲಿ 300 ಕಿ.ಮೀ ಕರಾವಳಿ ತೀರದಲ್ಲಿ ಪ್ರಕೃತಿ ಸಂಪತ್ತು ಇದ್ದರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ.ಕೇರಳ ಹಾಗೂ ಗೋವಾದಲ್ಲಿ ಪ್ರವಾಸೋದ್ಯಮ ಹೇಗೆ ಅಭಿವೃದ್ಧಿ ಆಯಿತು ಎಂಬುದನ್ನು ನೋಡಿಕೊಂಡು, ನಮ್ಮಲ್ಲಿನ ಸಂಪತ್ತು ಮತ್ತು ಯುವಜನರ ಕ್ರಿಯಾಶೀಲತೆ ಬಳಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕಾಗಿದೆ.ಈ ಬಗ್ಗೆ ನಾನು ಈ ಭಾಗದ ಎಲ್ಲ ಶಾಸಕರ ಜೊತೆ ಮಾತನಾಡಿದ್ದೇನೆ. ಅವರೂ ಈ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಕರಾವಳಿ ಭಾಗದ ಆಭಿವೃದ್ದಿ ಗೆ ವಿಶೇಷ ಆಸಕ್ತಿ ವಹಿಸುವ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ’ ಎಂದರು.
ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ಮುಂದಾಗಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲಿದ್ದೇವೆ. ಸರ್ಕಾರ ಕೆಲ ಮೂಲಸೌಕರ್ಯಗಳನ್ನು ಒದಗಿಸಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ’ ಎಂದರು.’ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದ ಜನಪ್ರತಿನಿಧಿಗಳು, ಉದ್ಯಮಿಗಳು, ಡೆವೆಲಪರ್ ಗಳು, ಹೂಡಿಕೆದಾರರು ಎನು ಆಲೋಚನೆ ಹೊಂದಿದ್ದಾರೆ ಎಂದು ತಿಳಿಯಬೇಕಿದೆ. ಕಾನೂನಿನಲ್ಲಿ ಏನೇನು ಅವಕಾಶಗಳಿವೆ ಎಂದೂ ಚರ್ಚಿಸಬೇಕಿದೆ ಎಂದರು.












