ಮಂಗಳೂರು: ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ಎಲ್ಲಾ ಬೆಂಬಲ ನೀಡಲಿದೆ.ಪ್ರವಾಸೋದ್ಯಮ ಬೆಳೆಯಲು ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅವರು ಮಂಗಳೂರಿನ ಹೋಟೆಲ್ ಅವತಾರ್ನಲ್ಲಿ ಆಯೋಜಿಸಲಾಗಿದ್ದ
ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ -2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರವಾಸೋದ್ಯಮ ಸಮಾವೇಶ -2026 ದಲ್ಲಿ ಬಂಡವಾಳ ಹೂಡಿಕೆ ಮಾಡಲು ಹಲವರು ಆಸಕ್ತಿ ವಹಿಸಿದ್ದು ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗುವವರಿಗೆ ಸರ್ಕಾರ ನೆರವಾಗಲಿದೆ. ದಕ್ಷಿಣ ಕನ್ನಡ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿರುವ ಜಿಲ್ಲೆಗಳು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರವಾಸೋದ್ಯಮ ನೀತಿ ರೂಪಿಸಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ಅನೇಕ ಸ್ಥಳಗಳಲ್ಲಿದ್ದು, ವಿಶೇಷವಾಗಿ
ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದರು. 2024 ರಿಂದ 29ರವರಿಗೆ ಐದು ವರ್ಷಗಳ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗಿದೆ ಎಂದರು.ಸುಮಾರು 320 ಕಿಮೀ ಕರಾವಳಿ ಪ್ರದೇಶವಿದ್ದರೂ, ಇಲ್ಲಿಯವರೆಗೆ ಅದನ್ನು ಪ್ರವಾಸೋದ್ಯಮಕ್ಕೆ ಸೂಕ್ತವಾಗಿ ಬಳಸಿಕೊಂಡಿಲ್ಲ. ಜಾಗತಿಕವಾಗಿ ಗುರುತಿಸಲ್ಪಟ್ಟ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಆಸಕ್ತಿ ವಹಿಸಿದೆ ಎಂದರು.
ವಿಧಾನಸಭಾಧ್ಯಕ್ಷ ಯು. ಟಿ.ಖಾದರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ಎಚ್. ಕೆ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಮಂಕಾಳ ವೈದ್ಯ, ಶಾಸಕರಾದ ಸುರೇಶ್ ಶೆಟ್ಟಿ, ಸತೀಶ್ ಸೈಲ್, ಭೀಮಣ್ಣ ನಾಯಕ್, ಅಶೋಕ್ ರೈ, ರಾಜೇಗೌಡ, ಐವನ್ ಡಿಸೋಜಾ, ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಾಮನಾಥ್ ರೈ , ವಿನಯ್ ಕುಮಾರ್ ಸೊರಕೆ ಮೊದಲಾದವರು ಉಪಸ್ಥಿತರಿದ್ದರು.












