ಬೆಂಗಳೂರು:ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರ್ಣಗೊಳಿಸಿರುವ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಸುದೀರ್ಘ ಅವಧಿಯ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನೂ ತನ್ನ ಮುಡಿಗೇರಿಸಿಕೊಂಡಿದ್ದಾರೆ. ಜನವರಿ 7ನೇ ತಾರೀಖಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ
ಏಳು ವರ್ಷ 240 ದಿನಗಳಷ್ಟು ಅವಧಿಯನ್ನು ಕ್ರಮಿಸಿದ ದಾಖಲೆಯನ್ನೂ ನಿರ್ಮಿಸಲಿದ್ದಾರೆ. ತನ್ಮೂಲಕ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.ಕರ್ನಾಟಕದಲ್ಲಿ ಸುದೀರ್ಘ ಅವಧಿ ಆಡಳಿತ ನಡೆಸಿದವರು ವಿರಳ. ಬಹುತೇಕರು ಐದು ವರ್ಷ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.ಉತ್ತಮ ಆಡಳಿತ ನೀಡುವಲ್ಲಿ ದಾಖಲೆ ಮಾಡಿದವರು ಹಿಂದುಳಿದವರ ಅರಸ ಎಂದೇ ಪ್ರಸಿದ್ಧರಾದ ಡಿ. ದೇವರಾಜ ಅರಸು ಅವರು 1972ರಿಂದ 1980ರವರೆಗೆ ಏಳು ವರ್ಷ 239 ದಿನಗಳ ಆಡಳಿತವನ್ನು ನಡೆಸಿದ್ದರು. ಕರ್ನಾಟಕ ಇತಿಹಾಸದಲ್ಲಿ ದಾಖಲಾದ ಅರಸುರವರ ಸಾಧನೆಯನ್ನು ಜನವರಿ 6ಕ್ಕೆ ಸರಿಗಟ್ಟಿರುವ ಸಿದ್ದರಾಮಯ್ಯ, ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದ್ದಾರೆ.
ಒಂದೇ ಜಿಲ್ಲೆಯವರಾಗಿ, ಹಿಂದುಳಿದ ಸಮುದಾಯವನ್ನು ಪ್ರತಿನಿಧಿಸುವವರಾಗಿ, ಸಾಮಾಜಿಕ ನ್ಯಾಯದ ಬಗೆಗಿನ ಬದ್ಧತೆಯಿಂದಾಗಿ ದೇವರಾಜ ಅರಸು ಹಾಗೂ ಸಿದ್ದರಾಮಯ್ಯನವರು ಸುದೀರ್ಘ ಆಡಳಿತ ನೀಡಿದ ಹೆಗ್ಗಳಿಕೆ ಪಡೆದಿದ್ದಾರೆ.












