ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 5 ರಂದು
ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್ 5 ರಂದು ಬೆಂಗಳೂರಿನಿಂದ ಹೊರಟು ಸಂಜೆ 4 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, ನಂತರ ಕಾಸರಗೋಡು ಜಿಲ್ಲೆಗೆ ತೆರಳಲಿದ್ದಾರೆ. ಮಂಜೇಶ್ವರದ
ಮಜೀರ್ಪಳ್ಳ ಮತ್ತು ಮುಳ್ಳೇರಿಯದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವರು. ಏ.9ರಂದು ಕೇರಳದಲ್ಲಿ
ವಿಧಾನಸಭಾ ಚುನಾವಣೆ ನಡೆಯಲಿದ್ದು ಅಂತಿಮ ಹಂತದ ಪ್ರಚಾರ ಕಾರ್ಯ ನಡೆಯುತಿದೆ. ಸಿಎಂ ಸಂಜೆ 5ಕ್ಕೆ ಮಂಜೇಶ್ವರದ ಮಜೀರ್ಪಳ್ಳದಲ್ಲಿ ಯುಡಿಎಫ್ ಚುನಾವಣಾ ಸಭೆಯಲ್ಲಿ ಪಾಲ್ಗೊಂಡು ಎ. ಕೆ.ಎಂ ಅಶ್ರಫ್ ಪರ ಪ್ರಚಾರ ಭಾಷಣ ನಡೆಸುವರು. ಬಳಿಕ ಸಂಜೆ 6.30 ಕ್ಕೆ ಮುಳ್ಳೇರಿಯದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿ 7.30ಕ್ಕೆ ನಿರ್ಗಮಿಸುವರು.ರಾತ್ರಿ 8:40ಕ್ಕೆ ಮುಖ್ಯಮಂತ್ರಿಗಳು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.








