ಸುಳ್ಯ:ಕವಿ ಸುಬ್ರಾಯ ಚೊಕ್ಕಾಡಿ ಅವರು ಉಲ್ಲೇಖಿಸಿದಂತೆ ದೀಪದಿಂದ ಬೆಳಕು ಎಲ್ಲೆಡೆ ಪಸರಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಜ್ಞಾನದ ಬೆಳಕನ್ನು ಹರಿಸಿ ಅರ್ಧ ಶತಮಾನದಿಂದ ಶಿಕ್ಷಣವನ್ಮು ಧಾರೆಯೆರೆಯುತ್ತಿರುವ ವಿದ್ಯಾ ದೇಗುಲ ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢ ಶಾಲೆ. ಸುವರ್ಣ ಮಹೋತ್ಸವ ಆಚರಿಸುತ್ತಿರುವ ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಚೊಕ್ಕಾಡಿ ಪ್ರೌಢ ಶಾಲೆಗೆ ಇದೀಗ ವಿದ್ಯಾ ದೇವತೆಗಳ ಅಭಯ. ಸುವರ್ಣ ಮಹೋತ್ಸವದ ಅಂಗವಾಗಿ ಸುಂದರವಾಗಿ ನವೀಕರಣಗೊಂಡ ಚೊಕ್ಕಾಡಿ ಪ್ರೌಢ ಶಾಲೆಯಲ್ಲಿ ನಿರ್ಮಾಣಗೊಂಡಿರುವ

ಆದಿ ಪೂಜಿತ ಗಣಪತಿ, ವಿದ್ಯೆಯ ಅಧಿ ದೇವತೆ ಶಾರದೆ ಹಾಗೂ ಗುರುಗಳ ಗುರು ವೇದವ್ಯಾಸರ ಶಿಲ್ಪಗಳು ವಿಶೇಷ ಗಮನ ಸೆಳೆಯುತಿದೆ. ಶಾಲಾ ಮೈದಾನಕ್ಕೆ ಪ್ರವೇಶ ಆಗುತ್ತಿದ್ದಂತೆ ಆವರಣದಲ್ಲಿ ನಿರ್ಮಿಸಿದ ಸುಂದರವಾದ ಗಣೇಶ ವಿಗ್ರಹ ನಮ್ಮನ್ನು ಸ್ವಾಗತಿಸುತ್ತದೆ. ಆದಿ ಪೂಜಿತನಾದ ಗಣಪತಿ ಸರ್ವ ವಿಘ್ನಗಳ ನಿವಾರಕ. ಶಾಲೆಗೆ ಆಗಮಿಸುವವರನ್ನು ಗಣೇಶನು ಸ್ವಾಗತಿಸಿ ಅನುಗ್ರಹಿಸಲಿ ಎಂಬ ಕಲ್ಪನೆ. ಸುಂದರವಾದ ಶಿಮೆಂಟ್ ಶಿಲ್ಪವನ್ನು ವರ್ಣಮಯವಾಗಿ ನಿರ್ಮಿಸಲಾಗಿದೆ. ಅದರ ಹಿಂಭಾಗದಲ್ಲಿ ಗೋಡೆಯಲ್ಲಿ ಶಾರದೆ ಹಾಗೂ ವೇದವ್ಯಾಸರ ಶಿಲ್ಪವನ್ನು ಅರಳಿಸಲಾಗಿದೆ. ವಿದ್ಯೆಯನ್ನು ಅನುಗ್ರಹಿಸುವ ದೇವತೆ ಶಾರದೆ. ಈ ಹಿನ್ನಲೆಯಲ್ಲಿ ವಿದ್ಯಾಮಾತೆಯನ್ನು ಅರಳಿಸಲಾಗಿದೆ. ಸಕಲ ಸಾಹಿತ್ಯಕ್ಕೂ ವಿದ್ಯೆಗೂ ಮೂಲವಾದ ಮಹಾಭಾರತ ರಚಿಸಿದ ವೇದವ್ಯಾಸರು ಗಣಪತಿಗೆ ಗುರುವಾಗಿದ್ದರು ಎಂಬ ಕಲ್ಪನೆ ಇದೆ. ಈ ಹಿನ್ನಲೆಯಲ್ಲಿ ಗಣಪತಿಯನ್ನು ಹರಸುವ ವೇದವ್ಯಾಸರ ಶಿಲ್ಪವನ್ನು ಅರಳಿಸಲಾಗಿದೆ.

ಒಟ್ಟಿನಲ್ಲಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಚೊಕ್ಕಾಡಿ ಶಾಲೆಯಲ್ಲಿ ಈ ದೇವತಾ ಶಿಲ್ಪಗಳು ವಿಶೇಷ ಗಮನ ಸೆಳೆಯುತಿದೆ. ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಸ್.ಅಂಗಾರ ಅವರ ಕಲ್ಪನೆಯಂತೆ ಸುಂದರ ಶಿಲ್ಪಗಳು ಅರಳಿ ಮನ ಸೆಳೆಯುತಿದೆ. ‘ಚೊಕ್ಕಾಡಿ ಪ್ರೌಢ ಶಾಲೆಯ ಈ ಪ್ರದೇಶಕ್ಕೆ ಹಿಂದೆ ಬಂಗಾರ ಪೇಟೆ ಎಂಬ ಹೆಸರಿತ್ತು.. ಸುವರ್ಣ ವರ್ಷದಲ್ಲಿ ಬಂಗಾರ ಪೇಟೆಯ ಈ ಶಾಲೆಗೆ ಅಂಗಾರರು ಬಂಗಾರದ ಕಿರೀಟ ತೊಡಿಸಿದ್ದಾರೆ ಎನ್ನುತ್ತಾರೆ ಕವಿ ಸುಬ್ರಾಯ ಚೊಕ್ಕಾಡಿಯವರು.










