ಸುಳ್ಯ: ಚೊಕ್ಕಾಡಿ ಎಜ್ಯಕೇಶನಲ್ ಸೊಸೈಟಿ ಕುಕ್ಕುಜಡ್ಕ ಪ್ರವರ್ತಿತ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸುವರ್ಣ ಮಹೋತ್ಸವ ಸಂಭ್ರಮ ಜನವರಿ 12,13,14 ರಂದು ನಡೆಯಲಿದೆ. 3 ದಿನಗಳ ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚೊಕ್ಕಾಡಿ ಎಜ್ಯಕೇಶನಲ್ ಸೊಸೈಟಿ ಅಧ್ಯಕ್ಷರು ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಮಾಜಿ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ
ಉದ್ದೇಶದಿಂದ ಹಿರಿಯರ ಪ್ರಯತ್ನ ಹಾಗೂ ಆಶಯದಂತೆ 1973-74ನೇ ಇಸವಿಯಲ್ಲಿ ಕುಕ್ಕುಜಡ್ಕದಲ್ಲಿ ಪ್ರೌಢ ಶಾಲೆ ಆರಂಭಗೊಂಡಿತು. ಬಳಿಕ ಗ್ರಾಮೀಣ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದ ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದು. ಇದೀಗ ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದರೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕೊರತೆ ಎದುರಾಗಿದೆ ಎಂದ ಅವರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುಸುವ ನಿಟ್ಟಿನಲ್ಲಿ ಪೂರಕ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದರು. ಶಾಲಾ ಕಟ್ಟಡದ ದುರಸ್ತಿ, ಗ್ರಂಥಾಲಯ, ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ , ಸುಸಜ್ಜಿತ ಕ್ರೀಡಾಂಗಣ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
3 ದಿನಗಳ ಸುವರ್ಣ ಸಂಭ್ರಮ:
3 ದಿನಗಳ ಕಾಲ ಅದ್ದೂರಿ ಸುವರ್ಣ ಸಂಭ್ರಮ ಆಚರಣೆ ನಡೆಸಲಾಗುವುದು. ಸಭಾ ಕಾರ್ಯಕ್ರಮಗಳು, ಸನ್ಮಾನ ಕಾರ್ಯಕ್ರಮ,
ಶೈಕ್ಷಣಿಕ ವಿಚಾರ ಗೋಷ್ಠಿಗಳು ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜನವರಿ 12 – ಶಾರದಾ ಆರ್ಟ್ಸ್ ‘ಐಸಿರಿ’ ಕಲಾವಿದೆರ್ ಮಂಜೇಶ್ವರ ಅಭಿನಯದ – ‘ಕಲ್ಲಿಗೆದ ಮಾಯ್ಕಾರೆ’ ಪೌರಾಣಿಕ ಮತ್ತು ಸಾಮಾಜಿಕ ‘ ಜನವರಿ 13 – ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ, ಜನವರಿ 14 – ಕುದ್ರೋಳಿ ಗಣೇಶ್ ಬಳಗದವರಿಂದ ‘ವಿಸ್ಮಯ ಜಾದೂ’ ನಡೆಯಲಿದೆ.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಳೆ ವಿದ್ಯಾರ್ಥಿಗಳಿಂದ, ಊರಿನ ಎಲ್ಲಾ ಶಾಲೆಗಳ ಮಕ್ಕಳಿಂದ ಹಾಗೂ ಸಂಘ ಸಂಸ್ಥೆಗಳ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಡಿ.10 ರಂದು ಹಳೆ ವಿದ್ಯಾರ್ಥಿಗಳ ಸಭೆ:
ಚೊಕ್ಕಾಡಿ ಎಜ್ಯಕೇಶನಲ್ ಸೊಸೈಟಿಯ ಸಂಚಾಲಕರು ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಮೂರು ದಿನಗಳ ಅದ್ದೂರಿ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಶಾಲೆಯಲ್ಲಿ ಶಿಕ್ಷಣ ಪಡೆದ ಸುಮಾರು 3500 ಹಳೆ ವಿದ್ಯಾರ್ಥಿಗಳು ಇದ್ದಾರೆ. ಇವರನ್ನು ಎಲ್ಲರನ್ನೂ ಸಂಪರ್ಕಿಸುವ ಪ್ರಯತ್ನ ನಡೆಸಲಾಗುತಿದೆ. ಅವರು ಎಲ್ಲರೂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಡಿ.10ರಂದು ಪೂ.10 ಗಂಟೆಗೆ ಎಲ್ಲಾ ಹಳೆ ವಿದ್ಯಾರ್ಥಿಗಳ ಸಭೆ ಕರೆಯಲಾಗಿದೆ. ಶಾಲೆಯ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.
ಡಿ.23-24 ಕ್ರೀಡಾಕೂಟ:
ಸುವರ್ಣ ಮಹೋತ್ಸವದ ಅಂಗವಾಗಿ ಹಳೆವಿದ್ಯಾರ್ಥಿಗಳಿಗೆ ಮತ್ತು ಅಮರಮೂಡೂರು, ಅಮರಪಡೂರು ಗ್ರಾಮಸ್ಥರಿಗೆ (ವಯಸ್ಸಿಗನುಗುಣವಾಗಿ) ಕ್ರೀಡಾಕೂಟ ಡಿಸೆಂಬರ್ 23, 24, 25 ರಂದು ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಕ್ರೀಡಾಕೂಟದ ಸಂಚಾಲಕ ರಜನೀಕಾಂತ್ ಎಂ.ಆರ್.ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಂಕೀರ್ಣ ಚೊಕ್ಕಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಸ್ವಿ ಕಡಪಳ, ಕಾರ್ಯದರ್ಶಿ ಮುರಳಿ ನಳಿಯಾರು ಉಪಸ್ಥಿತರಿದ್ದರು.