ಬೀಜಿಂಗ್: ವಾಯವ್ಯ ಚೀನಾದ ಗನ್ಸು ಮತ್ತು ಕಿಂಗ್ಜೈ ಪ್ರಾಂತ್ಯದಲ್ಲಿ ಸೋಮವಾರ ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, 111 ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪನದಲ್ಲಿ ಭೂಕಂಪದ ತೀವ್ರತೆ 6.2 ದಾಖಲಾಗಿದೆ.ಮಧ್ಯರಾತ್ರಿ 11.59ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಗನ್ಸು ಪ್ರಾಂತ್ಯದ ಲಿಯುಗೌ ಟೌನ್ಶಿಪ್ ಬಳಿ ಭೂಕಂಪದ
ಕೇಂದ್ರ ಬಿಂದು ದಾಖಲಾಗಿದೆ ಎಂದು ಚೀನಾದ ಭೂಕಂಪನ ನೆಟ್ವರ್ಕ್ ಸೆಂಟರ್ ತಿಳಿಸಿದೆ.ಭೂಕಂಪದಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ನೀರಿನ ಸಮಸ್ಯೆ ಉಂಟಾಗಿದೆ. ಮನೆಗಳು, ರಸ್ತೆಗಳು ಸೇರಿದಂತೆ ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿರುವುದಾಗಿ ವರದಿಯಾಗಿದೆ.ರಕ್ಷಣಾ ಕಾರ್ಯಾಚರಣೆ ನಡೆಯುತಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ.
ಭೂಕಂಪ ಸಂಭವಿಸಿರುವ ಪ್ರದೇಶಗಳಿಗೆ ಗನ್ಸುವಿನ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಮತ್ತು ಗವರ್ನರ್ ಭೇಟಿ ನೀಡಿ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.














