ಶ್ರೀಹರಿಕೋಟ: ಚಂದ್ರನ ಮೇಲ್ಮೈ ಮೇಲೆ ಗಗನ ನೌಕೆ ಇಳಿಸಿ ಅಧ್ಯಯನ ಕೈಗೊಳ್ಳುವ ಉದ್ದೇಶದ ಚಂದ್ರಯಾನ-3 ಉಡಾವಣೆ ಪ್ರಕ್ರಿಯೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಲ್ಲಿ ಶುಕ್ರವಾರ ಮಧ್ಯಾಹ್ನ ಯಶಸ್ವಿಯಾಗಿ ನಡೆದಿದೆ.
ಲ್ಯಾಂಡರ್ (ವಿಕ್ರಮ್) ಹಾಗೂ ರೋವರ್ (ಪ್ರಜ್ಞಾನ)ಹೊತ್ತ
ಬಾಹುಬಲಿ ಮಾರ್ಕ್ 3 ರಾಕೆಟ್ ಶುಕ್ರವಾರ ಮಧ್ಯಾಹ್ನ 2:35ಕ್ಕೆ ನಭಕ್ಕೆ ಚಿಮ್ಮಿದೆ. ಪ್ರಯಾಣವು 40 ದಿನಗಳನ್ನು ತೆಗೆದುಕೊಳ್ಳುತ್ತದೆ. ಆಗಸ್ಟ್ 23 ಅಥವಾ 24 ರಂದು ಬಾಹ್ಯಾಕಾಶ ನೌಕೆಯು ಚಂದ್ರನ ಅಂಗಳಕ್ಕೆ ತಲುಪುವ ನಿರೀಕ್ಷೆಯಿದೆ 2019ರಲ್ಲಿ ಕೈಗೊಂಡಿದ್ದ ಚಂದ್ರಯಾನ-2 ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ವಿಫಲವಾಗಿತ್ತು. ಹಾಗಾಗಿ ಈ ಬಾರಿ ವಿಜ್ಞಾನಿಗಳು ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಗಮನ ಕೇಂದ್ರೀಕರಿಸಲಿದ್ದಾರೆ. ಲ್ಯಾಂಡರ್ ಗೆ ಯಾವುದೇ ರೀತಿಯ ಹಾನಿಯಾಗದಂತೆ ಅದನ್ನು ಚಂದ್ರನ ಮೇಲೆ ಇಳಿಸುವ ಸಾಫ್ಟ್ ಲ್ಯಾಂಡಿಂಗ್ ಮಾಡಲು ಈ ಬಾರಿ ಹೆಚ್ಚು ಗಮನ ನೀಡಲಾಗಿದೆ.