ಬೆಂಗಳೂರು: ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ ಬಳಿಕ ವಿಕ್ರಮ ಲ್ಯಾಂಡರ್ ಜೊತೆ ಇಸ್ರೊ ಯಶಸ್ವಿಯಾಗಿ ಸಂವಹನ ಸಂಪರ್ಕ ಸಾಧಿಸಿದ್ದು ವಿಕ್ರಮ್ ಲ್ಯಾಂಡರ್ ಕಳುಹಿಸಿದ ಚಿತ್ರಗಳನ್ನು ಇಸ್ರೊ ಹಂಚಿಕೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯ ಚಂದ್ರಯಾನ–3 ಯಶಸ್ಸು ಕಂಡಿದೆ. ವಿಕ್ರಮ್ ಲ್ಯಾಂಡರ್ ಬುಧವಾರ ಸಂಜೆ 6.04ಕ್ಕೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವ
ಮೂಲಕ ಯೋಜನೆ ಯಶ ಕಂಡಿದೆ.ಚಂದ್ರಯಾನ-3 ಲ್ಯಾಂಡರ್ ಮತ್ತು ಬೆಂಗಳೂರಿನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ನಡುವೆ ಸಂವಹನ ಸಂಪರ್ಕವನ್ನು ಸ್ಥಾಪಿಸಲಾಗಿದೆ ಎಂದು ಇಸ್ರೊ ಎಕ್ಸ್ನಲ್ಲಿ(ಟ್ವಿಟರ್) ಪೋಸ್ಟ್ ಮಾಡಿದೆ. ವಿಕ್ರಮ್ ಲ್ಯಾಂಡರ್ ಇಳಿಯುವಾಗ ತೆಗೆದ ಚಿತ್ರಗಳನ್ನೂ ಇಸ್ರೊ ಪೋಸ್ಟ್ ಮಾಡಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆದ ಬಳಿಕ ಲ್ಯಾಂಡಿಂಗ್ ಇಮೇಜರ್ ಕ್ಯಾಮೆರಾ ಸೆರೆಹಿಡಿದ ಚಿತ್ರಗಳನ್ನೂ ಇಸ್ರೋ ಹಂಚಿಕೊಂಡಿದೆ.
ಚಿತ್ರದಲ್ಲಿ ಚಂದ್ರಯಾನ-3ನ ಲ್ಯಾಂಡಿಂಗ್ ಸೈಟ್ನ ಒಂದು ಭಾಗವನ್ನು ಕಾಣಬಹುದಾಗಿದೆ. ಲ್ಯಾಂಡರ್ನ ಒಂದು ಕಾಲು ಮತ್ತು ಅದರ ಜೊತೆಗಿರುವ ನೆರಳು ಕೂಡ ಚಿತ್ರದಲ್ಲಿ ಕಾಣಿಸುತ್ತದೆ. ಚಂದ್ರಯಾನ-3 ನೌಕೆ ಚಂದ್ರನ ಮೇಲ್ಮೈಯಲ್ಲಿ ಸಮತಟ್ಟಾದ ಪ್ರದೇಶವನ್ನು ಆಯ್ಕೆ ಮಾಡಿದೆ ಎಂದು ಇಸ್ರೊ ತಿಳಿಸಿದೆ.