ಸುಳ್ಯ: ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ
ನಿಯಮಿತ ಬೆಂಗಳೂರು, ಇದರ ನೂತನ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾಗಿರುವ ಸಹಕಾರಿ ರತ್ನ ಚಂದ್ರಾ ಕೋಲ್ಚಾರ್ ಅವರಿಗೆ ಅಭಿನಂದನಾ ಸಮಾರಂಭ ಮತ್ತು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಬೆಂಗಳೂರು ಇದರ ನೂತನ ಅಧ್ಯಕ್ಷ ಎಸ್.ಚಂದ್ರಶೇಖರ ಮೈಸೂರು ಇವರ ಅಧಿಕೃತ ಭೇಟಿ ಕಾರ್ಯಕ್ರಮ ಮಾ.15 ಶನಿವಾರ ಸಂಜೆ 5 ರಿಂದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ ಎಂದು
ಸಹಕಾರಿ ರತ್ನ ಚಂದ್ರಾ ಕೋಲ್ಚಾರ್ ಅಭಿನಂದನಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕರಾದ ದಿನೇಶ್ ಮಡಪ್ಪಾಡಿ ಕಳೆದ 30 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಾ ಕೋಲ್ಚಾರ್ ಅವರು ಇತ್ತೀಚೆಗೆ ರಾಜ್ಯ ಸಹಕಾರ ಪತ್ತಿನ ಸಂಘಗಳ ನಿಯಮಿತ ಬೆಂಗಳೂರು, ಮಹಾಮಂಡಳ ಇದರ ನೂತನ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾಗಿರುವುದು ನಮಗೆಲ್ಲ ಸಂತಸ ತಂದಿದೆ.
ಚಂದ್ರಾ ಕೋಲ್ಚಾರ್ ಅವರು ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತ ಉಳಿದ

ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಕ್ರಿಯರಾಗಿ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ.ಐವರ್ನಾಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಪೂರ್ವಾಧ್ಯಕ್ಷರಾಗಿ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪೂರ್ವಾಧ್ಯಕ್ಷರಾಗಿ ಇದೀಗ ಎರಡು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಜೇನು ವ್ಯವಸಾಯಗಾರರ ಸಂಘದ ಎರಡನೇ ಅವಧಿಗೂ ಅಧ್ಯಕ್ಷರಾಗಿರುವ ಇವರು ಅಧ್ಯಕ್ಷರಾಗಿ ಅಧಿಕಾರ ಮಾಡಿದ್ದಲ್ಲಿ ಸಂಸ್ಥೆಗೆ ಭದ್ರವಾದ ಕಟ್ಟಡವನ್ನು ಕಟ್ಟಿಸುವ ಮೂಲಕ ಭದ್ರ ನಾಯಕತ್ವ ನೀಡಿದ್ದಾರೆ. ಎಸ್.ಕೆ.ಎಸ್.ಎಮ್.ಎಸ್ ನ ಮಾಜಿ ನಿರ್ದೇಶಕರಾಗಿ ಪ್ರಕೃತ ದ.ಕ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾಗಿರುವ ಅವರು ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಮೂಲಕ ನಾಮ ನಿರ್ದೇಶನಗೊಂಡು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲಕ್ಕೆ ನಡೆದ ಮೈಸೂರಿನ ಚಂದ್ರಶೇಖರ್ ಎಸ್ ಅವರ ನಾಯಕತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತದಿಂದ ಆಯ್ಕೆಯಾಗಿರುವುದು ಸುಳ್ಯದ ಸಹಕಾರಿಗಳೆಲ್ಲರಿಗೂ ಹೆಮ್ಮೆ ಮತ್ತು ಅಭಿಮಾನ. ಈ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು. ಅಲ್ಲದೆ ಈ ಸಮಾರಂಭದಲ್ಲಿ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಇದರ ನೂತನ ಅಧ್ಯಕ್ಷರಾದ ಮೈಸೂರಿನ ಚಂದ್ರಶೇಖರ್ ಎಸ್ ಅವರು ಅಧಿಕೃತವಾಗಿ ಭೇಟಿಯನ್ನು ನೀಡಲಿದ್ದು ಅವರನ್ನು ಸ್ವಾಗತಿಸಿ ಅಭಿನಂದಿಸಲಾಗುವುದು.

ಇದೇ ಸಂದರ್ಭದಲ್ಲಿ ಸಹಕಾರಿಯ ಕ್ಷೇತ್ರದಲ್ಲಿ ಪ್ರಾಮಾಣಿಕ ಹಾಗೂ ಕ್ರಿಯಾಶೀಲರಾಗಿ ಸೇವೆಗೈದ ಐವರ್ನಾಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೀನಪ್ಪ ಗೌಡ ಕೆ, ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ಳಾರೆ ಇದರ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಕೃತ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ರಾಜೀವಿ ಆರ್ ರೈ ಬೆಳ್ಳಾರಿ, ಮಂಡಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಂತಕೃಷ್ಣ ಮತ್ತು ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಗಾರರ ಸಂಘದ ಉಪಾಧ್ಯಕ್ಷರು, ಕ್ರಿಯಾಶೀಲರಾಗಿರುವ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಿಗ್ಮಿ ಸಂಗ್ರಾಹಕ ವಸಂತ ಬೋರ್ಕರ್ ಅವವರನ್ನು ರಾಜ್ಯಾಧ್ಯಕ್ಷರು ಸನ್ಮಾನಿಸಲಿದ್ದಾರೆ.

ಮಾ.15ರಂದು ಸಂಜೆ 5 ರಿಂದ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಸುಮಧುರ ಆರಂಭಿಕ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಲಿದೆ. 5:30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಸುಳ್ಯದ ಹಿರಿಯ ಸಹಕಾರಿ ಜಾಕೆ ಮಾಧವ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಎಸ್ ಚಂದ್ರಶೇಖರ್ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠಂದೂರು ಚಂದ್ರಾ ಕೋಲ್ಚಾರ್ ಮತ್ತು ಚಂದ್ರಶೇಖರ್ ಅವರನ್ನು ಅಭಿನಂದಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೆ. ಆರ್.ಗಂಗಾಧರ್ ಅಭಿನಂದನಾ ಮಾತುಗಳನ್ನು ಆಡಲಿದ್ದಾರೆ. ಅಲ್ಲದೆ ಸಮಾರಂಭದ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಾಫ, ಪ್ರಮುಖರಾದ ಮಂಗಳೂರಿನ ಲೋಕಯ್ಯ ಗೌಡ ಕೆ. ಪಿ.ಸಿ.ಜಯರಾಮ,ಎ.ವಿ.ತೀರ್ಥರಾಮ, ಕೆ ಸಿ ಸದಾನಂದ, ಬಿಟ್ಟಿ ಬಿ ನೆಡುನಿಲಂ, ಪಿ ಎಸ್ ಗಂಗಾಧರ ಭಾಗವಹಿಸಲಿದ್ದಾರೆ.
ಅಲ್ಲದೇ ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಉತ್ಪಾದಕ ಸಹಕಾರಿ ಸಂಘ ಬೆಂಗಳೂರು ಇದರ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿರುವ ಸುಳ್ಯ ರೈತ ಉತ್ಪಾದಕರ ಸಂಘದ ಅಧ್ಯಕ್ಷರಾದ ಕೆ ವೀರಪ್ಪ ಗೌಡ ಕಣ್ಣಲ್ ಅವರನ್ನು ಅಭಿನಂದಿಸಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರಿ ರತ್ನ ಚಂದ್ರಾ ಕೋಲ್ಚಾರ್ ಅಭಿನಂದನಾ ಸಮಿತಿಯ ಅಧ್ಯಕ್ಷ ಎಸ್.ಆರ್.ಸೂರಯ್ಯ ಗೌಡ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೋಲ್ಚಾರು, ಕೋಶಾಧಿಕಾರಿ ಕೆ.ಟಿ.ವಿಶ್ವನಾಥ, ಜತೆ ಕಾರ್ಯದರ್ಶಿಗಳಾದ ಸುಪ್ರೀತ್ ಮೋಂಟಡ್ಕ, ಪ್ರೀತಮ್ ಡಿ.ಕೆ, ವಿನುತಾ ಪಾತಿಕಲ್ಲು ಉಪಸ್ಥಿತರಿದ್ದರು.