*ಲತಾಶ್ರೀ ಸುಪ್ರೀತ್ ಮೋಂಟಡ್ಕ.
ಸುಳ್ಯ:ಕಳೆದ 30 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಾ ಕೋಲ್ಚಾರ್ ಅವರು ಇತ್ತೀಚೆಗೆ ರಾಜ್ಯ ಸಹಕಾರ ಪತ್ತಿನ ಸಂಘಗಳ ನಿಯಮಿತ ಬೆಂಗಳೂರು, ಮಹಾಮಂಡಳ ಇದರ ನೂತನ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾಗಿದ್ದಾರೆ.ಚಂದ್ರಾ ಕೋಲ್ಚಾರ್ ಅವರು ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತ ಉಳಿದ
ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಕ್ರಿಯರಾಗಿ ಸಮಾಜಕ್ಕೆ ಕೊಡುಗೆ
ನೀಡುತ್ತಿದ್ದಾರೆ.ಆಲೆಟ್ಟಿ ಗ್ರಾಮದ ಕೋಲ್ಚಾರ್ ರಾಮಯ್ಯ ಗೌಡ ಮತ್ತು ಬಾಲಕಿ ದಂಪತಿಗಳ ಸುಪುತ್ರರಾಗಿ ಜನಿಸಿದ ಚಂದ್ರಶೇಖರ ಕೋಲ್ಚಾರ್ ಚಂದ್ರ ಕೋಲ್ಚಾರ್ ಎಂದೇ ಜನಜನಿತರಾಗಿದ್ದಾರೆ. ಪ್ರಸ್ತುತ ಚಂದ್ರಶೇಖರ ಕೋಲ್ಚಾರ್ ಐವರ್ನಾಡು ಗ್ರಾಮದಲ್ಲಿ ವಾಸ್ತವ್ಯ ಹೊಂದಿದ್ದು, ವಾಣಿಜ್ಯ ಪದವಿ ಶಿಕ್ಷಣವನ್ನು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪೂರೈಸಿದ್ದು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹಾಗೂ ಕೃಷಿ ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು.
ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿ ಕೊಂಡಿರುವ ಇವರು ಸುಮಾರು

10ವರ್ಷಗಳಿಂದ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇಲ್ಲಿ ನಿರ್ದೇಶಕರಾಗಿ ಪ್ರಸ್ತುತ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಹಕಾರಿ ಕ್ಷೇತ್ರದಲ್ಲಿನ ಕಾರ್ಯಕ್ಕಾಗಿ 2019ರಲ್ಲಿ ರಾಜ್ಯ ಸರಕಾರದ ತೋಟಗಾರಿಕಾ ಇಲಾಖೆಯಿಂದ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ, 2016-17, 2017-18, 2018-19ನೇ ಸಾಲಿನಲ್ಲಿ ಸತತ ಮೂರು ವರ್ಷಗಳಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಅಂತೆಯೇ 2023-24ನೇ ಸಾಲಿನ ಸಾಧನಾ ಪ್ರಶಸ್ತಿ ಇವರನ್ನರಸಿ ಬಂದಿರುವುದು ಹೆಮ್ಮೆಯ ಸಂಗತಿ. ಅಲ್ಲದೆ ಕರ್ನಾಟಕ ರಾಜ್ಯ ಸರಕಾರ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ಕೃಷ್ಟ ಸೇವೆಗಾಗಿ ನೀಡುವ ರಾಜ್ಯದ ಅತ್ಯುತ್ತಮ ಪ್ರಶಸ್ತಿಯಾದ 2020ರ ಸಹಕಾರಿ ರತ್ನ , ಧಾರವಾಡದಲ್ಲಿ ಜರಗಿದ 63ನೇ ಅಖಿಲಭಾರತ ಸಹಕಾರ ಸಪ್ತಾಹ 2016ರಲ್ಲಿ ರಾಜ್ಯದ ಉತ್ತಮ ಸಹಕಾರಿ ಪ್ರಶಸ್ತಿ, ಶ್ರೀ ಜ್ಞಾನ ಮಂದಾರ ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು ಕೊಡಮಾಡುವ 2019ರ ರಾಷ್ಟ್ರೀಯ ಪುರಸ್ಕಾರಗಳು ಕೂಡ ಇವರ ಮುಡಿಗೇರಿರುವುದು ಸಂತಸದ ವಿಷಯ.

ಸಹಕಾರಿ ಕ್ಷೇತ್ರದಲ್ಲಿನ ಇವರ ಹೆಜ್ಜೆ ಗುರುತುಗಳನ್ನು ಮೆಲುಕು ಹಾಕಿದಾಗ ಅಧ್ಯಕ್ಷರಾಗಿ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಸುಳ್ಯ ಸಂಸ್ಥೆಗೆ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಅತ್ಯುತ್ತಮ ಸಹಕಾರಿ ಸಂಸ್ಥೆ 2014-15, 2015-16, 2016-17 ಸತತ ಮೂರು ಬಾರಿ ರಾಜ್ಯ ಪ್ರಶಸ್ತಿಯನ್ನು ತಂದು ಕೊಟ್ಟ ಯಶಸ್ಸು ಇವರದು.ಅಲ್ಲದೆ ಒಂದು ಬಾರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಗಿ 1997-98ರ ಸಾಲಿನಲ್ಲಿ ಶೇಕಡಾ100% ಸಾಲ ವಸೂಲಾತಿ ಮಾಡಿದ ಕೀರ್ತಿ ಇವರದು. ಅಲ್ಲದೆ ಐವರ್ನಾಡು ಕೋ-ಅಪರೇಟಿವ್ ಬ್ಯಾಂಕಿನಲ್ಲಿ 8ವರ್ಷ ಅಧ್ಯಕ್ಷ, 15ವರ್ಷ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ.
ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಂಘ ಮಂಗಳೂರು ಇಲ್ಲಿ 10ವರ್ಷ ಗಳ ಕಾಲ ನಿರ್ದೇಶಕರಾಗಿ ಸೇವೆ, ಐನರ್ನಾಡು ರಬ್ಬರ್ ಉತ್ಪಾದಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಇಲ್ಲಿ 5ವರ್ಷ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಮಹತ್ಮಾಗಾಂಧಿ ಮಲ್ನಾಡು ಪ್ರೌಢ ಶಾಲೆ ಕೊಡಿಯಾಲಬೈಲು ಇದರ ಸ್ಥಾಪಕ ಸಂಚಾಲಕರಾಗಿ, ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಸಂಚಾಲಕರಾಗಿ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ, ಗೌಡ ಯುವ ಸೇವಾ ಸಂಘ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ದಕ್ಷಿಣ ಕನ್ನಡ ಗೌಡ ವಿದ್ಯಾವರ್ಧಕ ಸಂಘ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇದರ ಶಾಲಾಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಸುಳ್ಯ ಜೇಸಿಸ್ ಸುಳ್ಯ ಇದರ ಸಕ್ರಿಯ ಸದಸ್ಯರಾಗಿ, ಜಗತ್ ಪೌಂಡೇಶನ್(ರಿ.) ಸುಳ್ಯ ಟ್ರಸ್ಟ್ ನ್ನು ಸ್ಥಾಪಿಸಿ ಐವರ್ನಾಡಿನ ಬೆಂಗಮಲೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣ, ಐವರ್ನಾಡು ಗ್ರಾಮದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಸ್ವಾಗತ ಫಲಕಗಳ ಕೊಡುಗೆ ಸೇರಿದಂತೆ ಕಲೆ, ಸಾಹಿತ್ಯ, ವಿದ್ಯಾರ್ಥಿ ವೇತನದೊಂದಿಗೆ ತನ್ನನ್ನು ತಾನು ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ತಾವು ಸೇವೆ ಸಲ್ಲಿಸಿದ ಎಲ್ಲಾ ಸಂಘ ಸಂಸ್ಥೆಗಳನ್ನು, ಸಹಕಾರಿ ಕ್ಷೇತ್ರಗಳನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವುದರೊಂದಿಗೆ, ಇದೀಗ
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮೈಸೂರು ವಿಭಾಗದಿಂದ ಅತ್ಯಧಿಕ ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆ ಯಾಗಿರುತ್ತಾರೆ.
ನಾಳೆ ಸನ್ಮಾನ:
ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ
ನಿಯಮಿತ ಬೆಂಗಳೂರು, ಇದರ ನೂತನ ನಿರ್ದೇಶಕರಾಗಿ ಬಹುಮತದಿಂದ ಆಯ್ಕೆಯಾಗಿರುವ ಸಹಕಾರಿ ರತ್ನ ಚಂದ್ರಾ ಕೋಲ್ಚಾರ್ ಅವರಿಗೆ ಅಭಿನಂದನಾ ಸಮಾರಂಭ ಮತ್ತು ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಬೆಂಗಳೂರು ಇದರ ನೂತನ ಅಧ್ಯಕ್ಷ ಎಸ್.ಚಂದ್ರಶೇಖರ ಮೈಸೂರು ಇವರ ಅಧಿಕೃತ ಭೇಟಿ ಕಾರ್ಯಕ್ರಮ ಮಾ.15 ಶನಿವಾರ ಸಂಜೆ 5 ರಿಂದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ

ಇದೇ ಸಂದರ್ಭದಲ್ಲಿ ಸಹಕಾರಿಯ ಕ್ಷೇತ್ರದಲ್ಲಿ ಪ್ರಾಮಾಣಿಕ ಹಾಗೂ ಕ್ರಿಯಾಶೀಲರಾಗಿ ಸೇವೆಗೈದವರನ್ನು ಸನ್ಮಾನಿಸಲಾಗುವುದು.ಸುಳ್ಯದ ಹಿರಿಯ ಸಹಕಾರಿ ಜಾಕೆ ಮಾಧವ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಎಸ್ ಚಂದ್ರಶೇಖರ್ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠಂದೂರು ಚಂದ್ರಾ ಕೋಲ್ಚಾರ್ ಮತ್ತು ಚಂದ್ರಶೇಖರ್ ಅವರನ್ನು ಅಭಿನಂದಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೆ. ಆರ್.ಗಂಗಾಧರ್ ಅಭಿನಂದನಾ ಮಾತುಗಳನ್ನು ಆಡಲಿದ್ದಾರೆ. ಅಲ್ಲದೆ ಸಮಾರಂಭದ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಾಫ, ಪ್ರಮುಖರಾದ ಮಂಗಳೂರಿನ ಲೋಕಯ್ಯ ಗೌಡ ಕೆ. ಪಿ.ಸಿ.ಜಯರಾಮ,ಎ.ವಿ.ತೀರ್ಥರಾಮ, ಕೆ ಸಿ ಸದಾನಂದ, ಬಿಟ್ಟಿ ಬಿ ನೆಡುನಿಲಂ, ಪಿ ಎಸ್ ಗಂಗಾಧರ ಭಾಗವಹಿಸಲಿದ್ದಾರೆ.

(ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರು ಕೆವಿಜಿ ಆಯುರ್ವೇದ ಕಾಲೇಜಿನ ಉದ್ಯೋಗಿ. ಸಾಹಿತಿ ಹಾಗೂ ಸಂಘಟಕಿ)