ಸುಳ್ಯ:ದೇಶದ ಬೃಹತ್ ಅಭಿಯಾನವಾದ 2027ರ ಜನಗಣತಿ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ.ಕರ್ನಾಟಕದಾದ್ಯಂತ ಮೊದಲ ಹಂತದ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ.ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ ನಾಗರಿಕರು ಹೊಸದಾಗಿ ಪರಿಚಯಿಸಲಾದ ‘ಸ್ವಯಂ ಗಣತಿ ಪೋರ್ಟಲ್’ ಮೂಲಕ ಆನ್ಲೈನ್ನಲ್ಲಿ ತಮ್ಮ ವಿವರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಬಳಸಿ ಈ ಪ್ರಕ್ರಿಯೆಯನ್ನು
ಸುಲಭವಾಗಿ ಪೂರ್ಣಗೊಳಿಸಬಹುದು. ಏಪ್ರಿಲ್ 16 ರಿಂದ ಮೇ 15ರವರೆಗೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಪಟ್ಟಿ ತಯಾರಿಕೆ ಮತ್ತು ವಸತಿ ಗಣತಿ ನಡೆಸಲಿದ್ದಾರೆ.
ಮೊದಲ ಹಂತದಲ್ಲಿ ಮನೆ ಪಟ್ಟಿ ತಯಾರಿಕೆ ಮತ್ತು ಮನೆ ಗಣತಿ ನಡೆಯಲಿದೆ. ಮನೆ ಗಣತಿಯನ್ನು ಸ್ವಯಂ ಗಣತಿ ನಡೆಸಲು ಕೂಡ ಅವಕಾಶ ನೀಡಲಾಗಿದೆ. ಏ.1ರಿಂದ 15ರ ತನಕ ಆನ್ಲೈನ್ ಮೂಲಕ ಸ್ವಯಂ ಗಣತಿ ನಡೆಸಲು ಅವಕಾಶ ನೀಡಲಾಗುವುದು. ಏ.16ರಿಂದ ಮೇ.15ರ ತನಕ ಮನೆ ಗಣತಿಗೆ ನಿಯೋಜನೆಗೊಂಡ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಕ್ಷೇತ್ರ ಕಾರ್ಯ ನಡೆಸಿ ಮನೆ ಗಣತಿ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದ್ದು 2027 ಫೆಬ್ರವರಿ ತಿಂಗಳಲ್ಲಿ ಜನಗಣತಿ ನಡೆಯಲಿದೆ. ಸ್ವಯಂ-ಗಣತಿ ಒಂದು ನವೀನ ಮತ್ತು ಅನುಕೂಲಕರ ಆಯ್ಕೆಯಾಗಿದ್ದು, ಇದು ಮನೆಯ ಯಾವುದೇ ಮಾಹಿತಿದಾರರು ತಮ್ಮ ಮನೆ/ಕಚೇರಿಯ ಅನುಕೂಲಕರ ಸ್ಥಳದಿಂದ ಅಥವಾ ಸುರಕ್ಷಿತ ವೆಬ್ ಪೋರ್ಟಲ್ ಬಳಸಿ ಎಲ್ಲಿಂದಲಾದರೂ ತಮ್ಮ ಸಾಮಾನ್ಯ ಕುಟುಂಬದ ಮಾಹಿತಿಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚು ಆಧುನಿಕ,ಪರಿಣಾಮಕಾರಿ ಎಂದು ಹೇಳಲಾಗಿದೆ. ಸ್ವಯಂ ಗಣತಿ ಮಾಡಿದವರಿಗೆ ದೃಢೀಕರಣ ಸಂಖ್ಯೆ ದೊರೆಯುತ್ತದೆ. ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಅಧಿಕಾರಿಗಳು ಮನೆಗೆ ಬಂದಾಗ ಸ್ವಯಂ ಗಣತಿ ಮಾಡಿದವರು ಈ ದೃಢೀಕರಣ ಸಂಖ್ಯೆ ನೀಡಿ ಅದನ್ನು ಚೆಕ್ ಮಾಡಿ ಗಣತಿ ಪೂರ್ಣಗೊಂಡಿದೆ ಎಂಬುದನ್ನು ದೃಢೀಕರಿಸಿಕೊಳ್ಳಬೇಕು. ಮನೆ ಗಣತಿಗೆ ಮನೆ ಸಂಬಂಧಿತ ಇತರ 34 ಪ್ರಶ್ನಾವಳಿಗಳನ್ನು ನೀಡಲಾಗುತ್ತದೆ.
ಸ್ವಯಂ ಗಣತಿ ಮಾಡುವವರು ಆನ್ ಲೈನ್ ಮೂಲಕ ಈ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕು. ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಅಧಿಕಾರಿಗಳು ಮಾಹಿತಿ ಪಡೆದು ಭರ್ತಿ ಮಾಡುತ್ತಾರೆ. ಕ್ಷೇತ್ರ ಕಾರ್ಯದಲ್ಲಿ ವಿವಿಧ ಗ್ರಾಮ ಅಥವಾ ಪಟ್ಟಣಗಳಲ್ಲಿ 150-200 ಮನೆಗಳ ಬ್ಲಾಕ್ ಮಾಡಿ ಗಣತಿಗೆ ನಿಯೋಜನೆಗೋಂಡವರಿಗೆ ನೀಡಲಾಗುತ್ತದೆ.
ಜನಗಣತಿಯಿಂದ ಜನರ ಅನುಕೂಲಕ್ಕಾಗಿ ಕಲ್ಯಾಣ ಯೋಜನೆ ರೂಪಿಸಲು, ವಸತಿ-ಮೂಲ ಸೌಕರ್ಯ-ಸಾರ್ವಜನಿಕ ಸೇವೆ ಕುರಿತು ನೀತಿಗಳನ್ನು ರೂಪಿಸಲು ಸಹಕಾರಿ. ಆದುದರಿಂದ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ತಾಲೂಕು ಆಡಳಿತ ವಿನಂತಿಸಿದೆ.









