ಸುಳ್ಯ:ಭಾರತದ ಜನಗಣತಿ ನಡೆಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.ಇದರ ಅಂಗವಾಗಿ ಮೊದಲ ಹಂತದಲ್ಲಿ ಮನೆ ಪಟ್ಟಿ ತಯಾರಿಕೆ ಮತ್ತು ಮನೆ ಗಣತಿ ನಡೆಯಲಿದೆ. ಮನೆ ಗಣತಿಯನ್ನು ಸ್ವಯಂ ಗಣತಿ ನಡೆಸಲು ಕೂಡ ಅವಕಾಶ ನೀಡಲಾಗಿದೆ. ಏ.1ರಿಂದ 15ರ ತನಕ ಆನ್ಲೈನ್ ಮೂಲಕ ಸ್ವಯಂ ಗಣತಿ ನಡೆಸಲು ಅವಕಾಶ ನೀಡಲಾಗುವುದು. ಏ.16ರಿಂದ ಮೇ.15ರ ತನಕ ಮನೆ
ಗಣತಿಗೆ ನಿಯೋಜನೆಗೊಂಡ ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಕ್ಷೇತ್ರ ಕಾರ್ಯ ನಡೆಸಿ ಮನೆ ಗಣತಿ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಜನಸಂಖ್ಯಾ ಗಣತಿ ನಡೆಯಲಿದ್ದು 2027 ಫೆಬ್ರವರಿ ತಿಂಗಳಲ್ಲಿ ಜನಗಣತಿ ನಡೆಯಲಿದೆ.
ಸ್ವಯಂ-ಗಣತಿ ಒಂದು ನವೀನ ಮತ್ತು ಅನುಕೂಲಕರ ಆಯ್ಕೆಯಾಗಿದ್ದು, ಇದು ಮನೆಯ ಯಾವುದೇ ಮಾಹಿತಿದಾರರು ತಮ್ಮ ಮನೆ/ಕಚೇರಿಯ ಅನುಕೂಲಕರ ಸ್ಥಳದಿಂದ ಅಥವಾ ಸುರಕ್ಷಿತ ವೆಬ್ ಪೋರ್ಟಲ್ ಬಳಸಿ ಎಲ್ಲಿಂದಲಾದರೂ ತಮ್ಮ ಸಾಮಾನ್ಯ ಕುಟುಂಬದ ಮಾಹಿತಿಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚು ಆಧುನಿಕ,ಪರಿಣಾಮಕಾರಿ ಎಂದು ಹೇಳಲಾಗಿದೆ. ಸ್ವಯಂ ಗಣತಿ ಮಾಡಿದವರಿಗೆ ದೃಢೀಕರಣ ಸಂಖ್ಯೆ ದೊರೆಯುತ್ತದೆ. ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಅಧಿಕಾರಿಗಳು ಮನೆಗೆ ಬಂದಾಗ ಸ್ವಯಂ ಗಣತಿ ಮಾಡಿದವರು ಈ ದೃಢೀಕರಣ ಸಂಖ್ಯೆ ನೀಡಿ ಅದನ್ನು ಚೆಕ್ ಮಾಡಿ ಗಣತಿ ಪೂರ್ಣಗೊಂಡಿದೆ ಎಂಬುದನ್ನು ದೃಢೀಕರಿಸಿಕೊಳ್ಳಬೇಕು.
ಮನೆ ಗಣತಿಗೆ ಮನೆ ಸಂಬಂಧಿತ ಇತರ 34 ಪ್ರಶ್ನಾವಳಿಗಳನ್ನು ನೀಡಲಾಗುತ್ತದೆ. ಸ್ವಯಂ ಗಣತಿ ಮಾಡುವವರು ಆನ್ ಲೈನ್ ಮೂಲಕ ಈ ಪ್ರಶ್ನಾವಳಿಯನ್ನು ಭರ್ತಿ ಮಾಡಬೇಕು. ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ಅಧಿಕಾರಿಗಳು ಮಾಹಿತಿ ಪಡೆದು ಭರ್ತಿ ಮಾಡುತ್ತಾರೆ. ಕ್ಷೇತ್ರ ಕಾರ್ಯದಲ್ಲಿ ವಿವಿಧ ಗ್ರಾಮ ಅಥವಾ ಪಟ್ಟಣಗಳಲ್ಲಿ 150-200 ಮನೆಗಳ ಬ್ಲಾಕ್ ಮಾಡಿ ಗಣತಿಗೆ ನಿಯೋಜನೆಗೋಂಡವರಿಗೆ ನೀಡಲಾಗುತ್ತದೆ.
ಜನಗಣತಿಯಿಂದ ಜನರ ಅನುಕೂಲಕ್ಕಾಗಿ ಕಲ್ಯಾಣ ಯೋಜನೆ ರೂಪಿಸಲು, ವಸತಿ-ಮೂಲ ಸೌಕರ್ಯ-ಸಾರ್ವಜನಿಕ ಸೇವೆ ಕುರಿತು ನೀತಿಗಳನ್ನು ರೂಪಿಸಲು ಸಹಕಾರಿ. ಆದುದರಿಂದ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಸುಳ್ಯ ತಾಲೂಕು ಆಡಳಿತ ವಿನಂತಿಸಿದೆ.
ಅಧಿಕಾರಿಗಳ ನೇಮಕ:
ಅಪರ ಜಿಲ್ಲಾಧಿಕಾರಿ ಯವರು ಜಿಲ್ಲಾ ಜನಗಣತಿ ಅಧಿಕಾರಿಯಾಗಿರುತ್ತಾರೆ
ತಾಲೂಕು ತಹಶೀಲ್ದಾರರು ಚಾರ್ಜು ಅಧಿಕಾರಿ ಯಾಗಿರುತ್ತಾರೆ.ತಾಲೂಕು ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಇವರು ನೇಮಕಗೊಂಡಿರುತ್ತಾರೆ
ಗ್ರಾಮೀಣ ಪ್ರದೇಶಕ್ಕೆ ತಹಶೀಲ್ದಾರರು ಚಾರ್ಜು ಅಧಿಕಾರಿ ಆಗಿರುತ್ತಾರೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಮುಖ್ಯಾಧಿಕಾರಿಯವರು ಚಾರ್ಜು ಅಧಿಕಾರಿ ಆಗಿರುತ್ತಾರೆ.
ಸ್ವಯಂ ಗಣತಿ ನಮೂನೆ ಲಿಂಕ್ ಕೆಳಗೆ ನೀಡಲಾಗಿದೆ.














